ನಿಮ್ಮ ಮನೆಯ ಅಂಗಳದಲ್ಲಿ ಉಸುಕು ಅಥವಾ ಮಣ್ಣಿನ ರಾಶಿ ಇದ್ದರೆ, ಅದರ ತುಂಬೆಲ್ಲಾ ಚಿಕ್ಕ ಚಿಕ್ಕ ಕುಳಿಗಳು ಬಿದ್ದಿದ್ದನ್ನು ನೋಡಿರುತ್ತಿರುತ್ತೀರಿ. ಅದರಲ್ಲಿ ಅಡಗಿದ್ದ ಕೀಟವನ್ನು ಹೆಕ್ಕಿ ತೆಗೆದಿದ್ದೂ ನೆನಪಿರಬಹುದು. ಆದರೆ ಅದು ಅಲ್ಲಿ ಏಕೆ ಅಡಗಿರುತ್ತೆ? ಈ ಕೀಟದ ಹೆಸರೇನು ಎಂಬುದು ಗೊತ್ತೆ?
ಅದು ಆಂಟ್ ಲಯನ್! ಇದಕ್ಕೆ ಗುಬ್ಬಚ್ಚಿ ಕೀಟ ಎಂದು ಕರೆಯುತ್ತಾರೆ. ಆದರೆ, ಪಕ್ಷಿ ಜಾತಿಗೆ ಸೇರಿದ ಗುಬ್ಬಿಗೂ, ಕೀಟಗಳ ಜಾತಿಗೆ ಸೇರಿದ ಈ ಪುಟ್ಟ ಕೀಟಗಳಿಗೂ ಯಾವುದೇ ಸಂಬಂಧವಿಲ್ಲ. ಇವು ಡ್ರಾಗನ್ಫ್ಲೈಗಳ ಮರಿಗಳು. ಇರುವೆಗಳನ್ನು ಸಂಹರಿಸುವುದರಿಂದ ಇದಕ್ಕೆ ಆಂಟ್ ಲಯನ್ (ant lion) ಎಂಬ ಹೆಸರು ಬಂದಿದೆ. ಕಂಬಳಿ ಹುಳು ತನ್ನ ಗಾತ್ರಕ್ಕೆ ಅತಿ ಎನ್ನುವಷ್ಟು ತಿನ್ನುವಂತೆ, ಆಂಟ್ ಲಯನ್ ಗಳಿಗೂ ವಿಪರೀತ ಹಸಿವು. ಇರುವೆ, ಜೇಡ, ಚಿಕ್ಕ ಪುಟ್ಟ ಕೀಟಗಳು ಇದರ ಆಹಾರ. ಹೆಚ್ಚು ಕಡಿಮೆ ತನ್ನ ಗಾತ್ರದಷ್ಟೇ ಇರುವ ಇರುವೆಗಳನ್ನು ತಿನ್ನಲು ಇದು ಬಳಸುವ ತಂತ್ರ ವಿಶಿಷ್ಟವಾದುದು.
ಜೀವನ ಚಕ್ರ:
ಡ್ರಾಗನ್ಫ್ಲೈ ಅಥವಾ ಹೆಲಿಕಾಪ್ಟರ್ ಚಿಟ್ಟೆ ಮಣ್ಣಿನಲ್ಲಿ ಮೊಟ್ಟೆಯನ್ನು ಇಡುತ್ತದೆ. ತಿಂಗಳ ಬಳಿಕ ಹೊರ ಬರುವ ಮರಿ (ಆಂಟ್ ಲಯನ್ ಅಥವಾ ಗುಬ್ಬಚ್ಚಿ) ತಾಯಿಯನ್ನು ಹೋಲುವುದಿಲ್ಲ. ಮರಿಗೆ ರೆಕ್ಕೆಗಳಿರುವುದಿಲ್ಲ. ಈ ಪುಟ್ಟ ಕೀಟ 2ರಿಂದ 5 ಸೆಂ.ಮೀ. ನಷ್ಟು ದೊಡ್ಡದಿರುತ್ತದೆ. ತಲೆ, ಎದೆ ಮತ್ತು ಹೊಟ್ಟೆ ಎಂಬ ಮೂರು ಭಾಗಗಳಿದ್ದು, ಮೂರು ಜತೆ ಕಾಲು ಮತ್ತು ಒಂದು ಜತೆ ಸದೃಢವಾದ ಕೊಂಬುಗಳಿವೆ. ಸುಮಾರು ಎರಡು ವರ್ಷಗಳ ಕಾಲ ಬದುಕುವ ಈ ಗುಬ್ಬಚ್ಚಿಗಳು ನಂತರ ತನ್ನ ಸುತ್ತಲೂ ಕೋಶ ನಿಮರ್ಿಸಿಕೊಳ್ಳುತ್ತವೆ. ಇದನ್ನು ಪ್ಯೂಪಾವಸ್ಥೆ ಎನ್ನುತ್ತಾರೆ. ಎರಡು ವಾರದಲ್ಲಿ ಸಂಪೂರ್ಣ ರೂಪಾಂತರ ಹೊಂದಿ, ರೆಕ್ಕೆಗಳುಳ್ಳ ಕೀಟವಾಗಿ ಹೊರ ಬರುತ್ತದೆ. ಈ ಹಂತದಲ್ಲಿ ಅದು ಬದುಕುವುದು ಕೇವಲ ನಲವತ್ತು ದಿನಗಳಷ್ಟೇ. ಜಗತ್ತಿನಾದ್ಯಂತ ಆಂಟ್ ಲಯನ್ ಗಳ ಸುಮಾರು 2 ಸಾವಿರ ಪ್ರಜಾತಿಗಳಿವೆ.
ಕುಳಿ ತೋಡುವುದು ಹೇಗೆ?
ಮರಳು ಮಿಶ್ರಿತ ಸಡಿಲವಾದ ಮಣ್ಣಿನಲ್ಲಿ, ಈ ಗುಬ್ಬಚ್ಚಿ ತನ್ನ ಹಿಂಭಾಗದಿಂದ (ಹಿಮ್ಮುಖವಾಗಿ) ತಿರುಗುತ್ತಾ ಚಿಕ್ಕಕುಳಿಯನ್ನು ನಿರ್ಮಿಸುತ್ತದೆ. ತಲೆಕೆಳಗಾದ ಶಂಕುವಿನ ಆಕೃತಿಯಲ್ಲಿ ಕುಳಿಯನ್ನು ತೋಡುತ್ತದೆ. ಈ ಕುಳಿಗಳು ಒಂದರಿಂದ ಎರಡು ಇಂಚಿನಷ್ಟು ವ್ಯಾಸ ಮತ್ತು ಅಷ್ಟೇ ಆಳವನ್ನು ಹೊಂದಿರುತ್ತವೆ.
ಅತಿಯಾದ ಬಿಸಿಲು ಮತ್ತು ಗಾಳಿ ಬೀಸುವ ಸ್ಥಳಗಳನ್ನು ಅದು ಆರಿಸಿಕೊಳ್ಳುವುದಿಲ್ಲ. ಕಟ್ಟಡಗಳ ಕೆಳಗಿನ ಜಾಗ, ನದಿ ದಂಡೆಗಳ ಮೇಲೆ ಕುಳಿಗಳನ್ನು ನಿರ್ಮಿಸುತ್ತದೆ. ಕುಳಿಯ ಕೆಳಭಾಗದಲ್ಲಿ ಕೊಂಬನ್ನು ಮಾತ್ರ ಮೇಲೆ ಚಾಚಿ ಅಡಗಿ ಕೂರುತ್ತದೆ. ಈ ಕುಳಿಯೇ ಅದರ ಮನೆ.
ಇರುವೆ ಹಿಡಿಯುವುದು ಹೇಗೆ?
ಇರುವೆಯಂತಹ ಚಿಕ್ಕಪುಟ್ಟ ಕೀಟಗಳು ಈ ಕುಳಿಯಲ್ಲಿ ಬಿದ್ದಾಗ ಕೊಂಬಿನಿಂದ ಮಣ್ಣನ್ನು ಎರಚುತ್ತಾ ಅದು ಮೇಲೆ ಹತ್ತಿ ತಪ್ಪಿಸಿಕೊಳ್ಳದಂತೆ ತಡೆದು, ಅವುಗಳ ಜೀವ ದ್ರವ್ಯವನ್ನು ಹೀರುತ್ತದೆ ಈ ಆಂಟ್ಲಯನ್. ಇವು ಎಷ್ಟುವೇಗವಾಗಿ ದಾಳಿ ಮಾಡುತ್ತವೆ ಅಂದರೆ, ಒಮ್ಮೆ ಇರುವೆಗಳು ಕುಳಿಯೊಳಕ್ಕೆ ಇಳಿದರೆ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ.
ಪರಿಸರ ಸ್ನೇಹಿ:
ಇರುವೆಗಳನ್ನು ಬೇಟೆ ಆಡುವುದಕ್ಕೆ ಹೆಸರುವಾಸಿಯಾಗಿರುವ ಆಂಟ್ ಲಯನ್ ಗಳು ಮನುಷ್ಯರಿಗೆ ಉಪಕಾರಿಯಾಗುವ ಪಾತ್ರವನ್ನು ನಿರ್ವಹಿಸುತ್ತದೆ. ಹಾನಿಕಾರಕ ಕೆಂಪು ಇರುವೆಗಳು, ಸಣ್ಣ ಜೇಡಗಳನ್ನು ತಿಂದು ಅವುಗಳ ಸಂತತಿಯನ್ನು ನಿಯಂತ್ರಿಸುತ್ತದೆ. ಹೀಗಾಗಿ ಇದರ ಕುಳಿಗಳನ್ನು ನಾಶಮಾಡದೇ ಹಾಗೇ ಇಡುವುದು ಒಳ್ಳೆಯದು. ಪಾಶ್ಚಾತ್ಯ ದೇಶಗಳಲ್ಲಿಯೂ ಇದು ಮಕ್ಕಳಿಗೆ ಇಷ್ಟವಾದ ಜೀವಿ.
ಮಳೆ ಬಂದ ಸಮಯದಲ್ಲಿ ನಮ್ಮ ಮನೆ ಹತ್ತಿರ ಇದು ಕಂಡು ಬರ್ತಿತ್ತು.ಆದ್ರೆ ಇಷ್ಟು ವಿವರವಾಗಿ ಈಗ್ಲೇ ಗೊತ್ತಾಗಿದ್ದು.....
ReplyDeleteನಿಮ್ಮ ಆಸಕ್ತಿಗೆ ಖುಷಿಯಾಯ್ತು... ಧನ್ಯವಾದಗಳು.....
ಮಾಹಿತಿಗಾಗಿ ದನ್ಯವಾದಗಳು
ReplyDelete