ಜೀವನಯಾನ

Sunday, March 2, 2014

ಅಪರೂಪವಾಗುತ್ತಿರುವ ನೀರು ಕಾಗೆ

ಕಾಗೆಗಳ ಹಾಗೆ ಅಪ್ಪಟ ಕಪ್ಪು. ಚುರುಕಿನ ಚಲನವಲನ. ಸದಾಜಾಗೃತಾವಸ್ಥೆ. ಎಲ್ಲೆಲ್ಲಿ ನೀರು ಕಡಿಮೆ ಇದೆಯೋ ಅಲೆಲ್ಲಾ ಗುಂಪಾಗಿ ಸೇರಿಕೊಂಡು ನೀರಿನಲ್ಲಿ ಮುಳುಗಿ ಮೀನುಗಳನ್ನು ಬೆನ್ನುಹತ್ತಿ ಹೋಗಿ ಹಿಡಿಯುವುದು ನೀರು ಕಾಗೆಯ ಸ್ವಭಾವ. ನೀರು ಕಾಗೆ ಉದ್ದವಾದ ಕುತ್ತಿಗೆಯಿಂದ ಸಾಮಾನ್ಯ ದೇಹಗಾತ್ರದಲ್ಲಿ ಕೊಕ್ಕರೆಯನ್ನು ಹೋಲುತ್ತದೆ. ಬಿಳಿಕೊಕ್ಕರೆ ಕೂಡ ನೀರು ಕಾಗೆಗಳ ಜತೆಗೆ ಇರುತ್ತವೆ. ಕೊಕ್ಕರೆಗೆ ಈ ನೀರುಕಾಗೆಗಳು ಹೆದರುತ್ತವೆ! ಕೆಲವೊಮ್ಮೆ ನೀರು ಕಾಗೆಗಳು ಬೇಟೆಯಾಡಿ ತಂದ ಮೀನುಗಳನ್ನು ಕೊಕ್ಕರೆಗಳು ಆಕ್ರಮಿಸುವುದೂ ಇದೆ. ಇವು ಸಾಮಾನ್ಯವಾಗಿ ಕೆರೆ, ನದಿ ಹಾಗೂ ಹಳ್ಳಗಳ ಬಳಿ ವಾಸಿಸುತ್ತವೆ.


 ಕಪ್ಪು ಡಾರ್ಟರ್ ಬರ್ಡ್
ನೀರುಕಾಗೆಗೆ ಸಂಸ್ಕೃತದಲ್ಲಿ ಜಲಕಾಕ ಎನ್ನುವ ಹೆಸರಿದೆ. ಇದನ್ನು ಇಂಗ್ಲಿಷ್ನಲ್ಲಿ ಡಾರ್ಟರ್ ಬರ್ಡ್ ಎಂದು ಕರೆಯುತ್ತಾರೆ. ಏಷ್ಯಾದಲ್ಲಿ ವಾಸಿಸುವ ಕಪ್ಪು ಡಾರ್ಟರ್ ಪಕ್ಷಿಗಳು ಅಪರೂಪಕ್ಕೆ ಕಂಡುಬರುವ ಜೀವವೈವಿದ್ಯಗಳಲ್ಲಿ ಒಂದೆನಿಸಿವೆ. ಪಶ್ಚಿಮ ಘಟ್ಟಗಳಲ್ಲಿಯೂ ಇವುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಈಗಾಗಲೇ ಅಳಿವಿನ ಅಂಚಿನಲ್ಲಿರುವ ಪಕ್ಷಿ ಪ್ರಭೇದಗಳ ಪಟ್ಟಿಗೆ ಇವು ಸೇರಿವೆ. ಇದರ ಉದ್ದನೆಯ ಕತ್ತು ಮತ್ತು ತಲೆ ಹಾವನ್ನು ಹೋಲುತ್ತದೆ. ಇದು ನೀರಿನಲ್ಲಿ ಮುಳುಗಿ ಕತ್ತನ್ನಷ್ಟೇ ಮೇಲಕ್ಕೆತ್ತಿ ಸಾಗುವಾಗ ಹಾವಿನಂತೆ ಗೋಚರಿಸುತ್ತವೆ. ಹೀಗಾಗಿ ಈ ಹಕ್ಕಿಗೆ ಸ್ನೇಕ್ ಬರ್ಡ್  ಎಂದೂ ಕರೆಯಲಾಗುತ್ತದೆ.
ನೀರಿನಿಂದ ಮೇಲಕ್ಕೆದ್ದು ಜಿಗಿಯುವ ಮೀನುಗಳನ್ನು ತಿನ್ನುವುದು ಈ ಹಕ್ಕಿಯ ವೈಶಿಷ್ಟ್ಯ. ಇವು ತಮ್ಮ ಒದ್ದೆಯಾದ ರೆಕ್ಕೆಗಳನ್ನು ಒಣಗಿಸಿಕೊಳ್ಳಲು ಮರದ ಟೊಂಗೆಗಳ ಮೇಲೆ ಅಥವಾ ಬಂಡೆಗಳ ಮೇಲೆ ವಿರಮಿಸುತ್ತವೆ. ನೀರಿರುವ ಪ್ರದೇಶಕ್ಕೆ ಹೊಂದಿಕೊಂಡು ಹಲವುಕೋಣೆಗಳಿರುವ ಗೂಡು ನಿರ್ಮಿಸುತ್ತವೆ. ನೀಲಿ ಹಾಗೂ ಬಿಳಿ ಮಿಶ್ರಿತ ಬಣ್ಣದ 3 ರಿಂದ 4 ಮೊಟ್ಟೆಗಳನ್ನು ಇಡುತ್ತದೆ. ಇವುಗಳ ಜೀವಿತಾವಧಿ 16 ವರ್ಷ.

ನೀರಿನಲ್ಲಿ ಮುಳುಗಿ ಬೇಟೆ:
ನೀರು ಕಾಗೆಗಳು ನೀರಲ್ಲಿಯೂ, ನೆಲದ ಮೇಲೂ ಓಡಾಡುತ್ತವೆ. ಬಲವಾದ ಕಾಲುಗಳು, ನೀರಿನಲ್ಲಿ ಮುಳುಗಿ ಈಜಲು ಮತ್ತು ಹಾರಲು ಎರಡೂ ರೀತಿಯಲ್ಲಿ ಅನುಕೂಲವಾದ ರೆಕ್ಕೆಗಳು, ನೀರಿನಲ್ಲಿ ಮುಳುಗಿಯೂ ಒದ್ದೆಯಾಗದ ಗರಿಗಳು ಇವಕ್ಕೆ ಪೃಕೃತಿ ದತ್ತ ಕೊಡುಗೆಗಳು. ಇವು ನೀರಿನಲ್ಲಿರುವ ಮೀನು ಮಾತ್ರವಲ್ಲದೇ, ನೀರಿನಲ್ಲಿ ತೇಲಿಬರುವ ಸತ್ತಯಾವುದೇ ಪ್ರಾಣಿಗಳನ್ನು ತಿನ್ನುತ್ತವೆ. ನೀರಿನಲ್ಲಿ ಮುಳುಗಿಕೊಂಡು ಬಹಳಷ್ಟು ದೂರಕ್ಕೆ ಹೋಗಬಲ್ಲದು. ಬೇಟೆಯನ್ನು ಬೆಂಬತ್ತಿ ಹೋಗುವಾಗ ಸುಮಾರು ಎರಡು ನಿಮಿಷಗಳ ಕಾಲ ನೀರಿನಲ್ಲಿ ಮುಳುಗಿಯೇ ಇರುವ ಸಾಮಥ್ರ್ಯ ಇವುಗಳಿಗೆ ಇದೆ.

 ಮಳೆಗಾಲದದಲ್ಲಿ ವಲಸೆ: 
  • ನೀರು ಕಾಗೆಗಳು ಮಳೆಗಾಲದಲ್ಲಿ ಕಾಣಸಿಗುವುದು ಅಪರೂಪ. ಆಹಾರವನ್ನು ಅರಸಿ ವಲಸೆ ಹೋಗುವುದಾಗಿ ನಂಬಲಾಗಿದೆ.
  • ದೂರಕ್ಕೆ ಹಾರಿಹೋಗುವಾಗ ಅತ್ಯಂತ ಎತ್ತರದಲ್ಲಿ ಹಾರುತ್ತವೆ. ಹಾರುವಾಗ ಗುಂಪಿನಲ್ಲಿ ಒಂದು ಹಕ್ಕಿ ಮುಂದಕ್ಕೆ, ಉಳಿದವು ಅದರ ಹಿಂದೆ ಬಾಣದ ಮಾದರಿಯಲ್ಲಿ ಹಾರುತ್ತವೆ. 
  • ರಾತ್ರಿಯಾದಂತೆ ಎತ್ತರದ ಮರಗಳ ಮೇಲೆ ಆಶ್ರಯ ಪಡೆಯುತ್ತವೆ. ನಿಶ್ಯಬ್ದವಾಗಿರುವುದು ಇವುಗಳ ಸ್ವಭಾವ.
  • ಬಲವಾದ ಕೊಕ್ಕು, ಸದೃಢ ಕಾಲುಗಳು ಚುರುಕು ಕಣ್ಣು, ಮತ್ತು ಶಬ್ದ ಗ್ರಹಿಸುವ ಶಕ್ತಿ ಇದಕ್ಕಿದೆ. 
  • ಈ ಹಕ್ಕಿಯ ಮರಿಗಳು ಹಾರುವುದನ್ನು ಕಲಿಯುವುದಕ್ಕಿಂತ ಮುಂಚೆಯೇ, ಈಜಾಡುವುದನ್ನು ಕಲಿಯುತ್ತವೆ! ಪ್ರಾಣರಕ್ಷಣೆಗಾಗಿ ವೈರಿಯಿಂದ ತಪ್ಪಿಸಿಕೊಳ್ಳಲು ನೀರಿಗೆ ಧುಮುಕುತ್ತವೆ.
  • ಜೀವಿತಾವಧಿಯಲ್ಲಿ ಒಂದು ಬಾರಿ ಡಾರ್ಟರ್ ಪಕ್ಷಿ ತನ್ನ ಎಲ್ಲ ಗರಿಗಳನ್ನು ಉದುರಿಸಿಕೊಳ್ಳುತ್ತದೆ. ಮತ್ತೆ ಹೊಸದಾಗಿ ಗರಿಗಳು ಮೂಡುವ ತನಕ ಇದಕ್ಕೆ ಹಾರಲು ಆಗುವುದಿಲ್ಲ. ಈ ಸಮಯದಲ್ಲಿ ಯಾವುದೇ ಚಟುವಟಿಕೆ ನಡೆಸದೇ ಮೌನವಾಗಿರುತ್ತದೆ.
  • ಮಳೆಗಾಲದ ದಿನದಲ್ಲಿ ಕತ್ತನ್ನು ಆಕಾಶದತ್ತ ಮಾಡಿ ನೇರವಾಗಿ ಬೀಳುವ ಮಳೆಯ ಹನಿಗಳನ್ನು ಗಂಟಲಿಗೆ ಇಳಿಸಿಕೊಳ್ಳುತ್ತದೆ.








 

No comments:

Post a Comment