ಕಸ್ತೂರಿ ಮೃಗ ತನ್ನ ಹೊಟ್ಟೆಯಲ್ಲೇ ಕಸ್ತೂರಿ ಇಟ್ಟುಕೊಂಡು, ತಾನೇ ಸುವಾಸನೆ ಹೊರಗೆಡುವುತ್ತೇನೆಂಬುದರ ಅರಿವೇ ಇಲ್ಲದೆ ಸುವಾಸನೆಗಾಗಿಯೇ ಹುಡುಕುತ್ತಾ ಜೀವನವನ್ನು ಅಂತ್ಯಗೊಳಿಸಿಕೊಳ್ಳುತ್ತದೆ ಎಂದು ನೀವೆಲ್ಲಾ ಅನೇಕ ಕತೆಗಳಲ್ಲಿ ಕೇಳಿರುತ್ತೀರಿ. ಅಷ್ಟಕ್ಕೂ, ಜಿಂಕೆಯನ್ನೇ ಹೋಲುವ ಈ ಮೃಗ ಕಸ್ತೂರಿಯನ್ನು ಹೊರಸೂಸುವುದು ಏಕೆ ಗೊತ್ತೆ? ತನ್ನ ಸಂಗಾತಿಯನ್ನು ಆಕರ್ಷಿಸಲು! ಹೌದು, ಈ ಮೃಗದ ಹೊಕ್ಕಳು ಮತ್ತು ಜನನಾಂಗದ ನಡುವಿನ ಪುಟ್ಟ ಗೃಂಥಿಯಲ್ಲಿ ಪರಿಮಳ ಬೀರುವ ಕಸ್ತೂರಿಯಿರುತ್ತದೆ. ಆದರೆ, ಈ ಗೃಂಥಿ ಎಲ್ಲ ಕಸ್ತೂರಿ ಮೃಗಗಳಲ್ಲಿ ಇರದೆ, ಪ್ರೌಢಾವಸ್ಥೆಗೆ ಬಂದ ಗಂಡಿನಲ್ಲಿ ಮಾತ್ರ ಕಂಡುಬರುತ್ತದೆ.
ನಾಚಿಕೆ ಸ್ವಭಾವ:
ಕಸ್ತೂರಿ ಮೃಗವು ಪರ್ವತ ಕಾಡುಗಳ ಪ್ರಾಂತ್ಯದಲ್ಲಿ ಜೀವಿಸುವ ಸಸ್ಯಾಹಾರಿ ಪ್ರಾಣಿ. ಇವು ಸಾಮಾನ್ಯವಾಗಿ ಮಾನವ ವಸತಿಯಿಂದ ಬಲು ದೂರದಲ್ಲಿ ನೆಲೆಸುತ್ತವೆ. ನೋಡಲು ಸಣ್ಣಗಾತ್ರದ ಜಿಂಕೆಯನ್ನು ಹೋಲುತ್ತದೆ. ಜಿಂಕೆಗಳ ವರ್ಗಕ್ಕೇ ಸೇರಿದ ಶಾಂತ ಪ್ರಾಣಿಗಳು. ಜೀವಶಾಸ್ತ್ರದ ಪ್ರಕಾರ ಮೋಷಿಡೇ ಎಂಬ ಕುಟುಂಬಕ್ಕೆ ಸೇರಿವೆ. ಜಿಂಕೆಗಿಂತ ಹಿಂದಿನಿಂದಲೇ ಜೀವಿಸಿವೆ ಎಂದು ಹೇಳಲಾಗಿದೆ. ಜಿಂಕೆಗೂ ಕಸ್ತೂರಿ ಮೃಗಕ್ಕೂ ಇರುವ ಪ್ರಮುಖ ವ್ಯತ್ಯಾಸವೆಂದರೆ, ಕಸ್ತೂರಿ ಮೃಗಕ್ಕೆ ಕೊಂಬುಗಳಿರುವುದಿಲ್ಲ. ಬಣ್ಣದಲ್ಲಿ ತುಸು ವ್ಯತ್ಯಾಸವಿರುತ್ತದೆ. ಬಾಯಿಯಲ್ಲಿ ಉದ್ದನೆಯ ಕೋರೆ ಹಲ್ಲುಗಳಿರುತ್ತದೆ. ಮಧ್ಯ ಏಷ್ಯಾ ಮತ್ತು ಸೈಬೇರಿಯಾದಲ್ಲಿ ಕಂಡುಬರುವ ಈ ಜಿಂಕೆಗಳು ಭಾರತದ ಹಿಮಾಲಯದಲ್ಲಿಯೂ ಕಂಡುಬರುತ್ತವೆ.
ಚಿನ್ನಕ್ಕಿಂತಲೂ ಹೆಚ್ಚಿನ ಬೆಲೆ:
ಕಸ್ತೂರಿ ದ್ರವ್ಯನ್ನು ಸುಗಂಧಗಳ ತಯಾರಿಕೆಗೆ ಬಳಸಲಾಗುತ್ತಿದೆ. ಕಸ್ತೂರಿ ದ್ರವ್ಯ ಚಿನ್ನಕ್ಕಿಂತಲೂ ಮೂರು ಪಟ್ಟು ದುಬಾರಿ. ಒಂದು ಕೆ.ಜಿ. ಕಸ್ತೂರಿ ದ್ರವ್ಯಕ್ಕೆ ಮಾರುಕಟ್ಟೆಯಲ್ಲಿ ಸುಮಾರು 27 ಲಕ್ಷ ರೂ. ಬೆಲೆಯಿದೆ. ಬೇಟೆಗಾರರ ಕಾಟ:
ಹೀಗಾಗಿ ಕಸ್ತೂರಿ ಮೃಗಗಳ ಕಳ್ಳಬೇಟೆ ಕೂಡಾ ಅಷ್ಟೇ ವ್ಯಾಪಕ ಪ್ರಮಾಣದಲ್ಲಿ ನಡೆಯುತ್ತಿದೆ. ಒಂದು ಅಂದಾಜಿನ ಪ್ರಕಾರ ರಷ್ಯಾವೊಂದರಲ್ಲೇ ಪ್ರತಿವರ್ಷ 20 ಸಾವಿರ ಕಸ್ತೂರಿ ಮೃಗಗಳ್ನು ಸುಗಂಧ ದ್ರವ್ಯಕ್ಕಾಗಿ ಕೊಲ್ಲಲಾಗುತ್ತಿದೆ. ಕಳ್ಳಬೇಟೆಯಿಂದಾಗಿ ಕಸ್ತೂರಿ ಮೃಗಗಳ ಸಂಖ್ಯೆ ಅಪಾಯಕಾರಿ ಮಟ್ಟದಲ್ಲಿ ಕ್ಷೀಣಿಸುತ್ತಿದೆ.
ಔಷಧಿಯಾಗಿಯೂ ಬಳಕೆ:
ಕಸ್ತೂರಿ ದ್ರವ್ಯ 5000 ವರ್ಷದಿಂದ ಚೀನಾ ಮತ್ತು ಭಾರತದಲ್ಲಿ ಸಾಂಪ್ರದಾಯಿಕ ಔಷಧಿಯಾಗಿ ಬಳಕೆಯಲ್ಲಿದೆ. ನರದೌರ್ಬಲ್ಯ, ಹೃದಯಾಘಾತ, ರಕ್ತಪರಿಚಲನೆಗಾಗಿ ಕಸ್ತೂರಿ ದ್ರವ್ಯವನ್ನು ಬಳಕೆ ಮಾಡಲಾಗುತ್ತದೆ. ಆಯುವರ್ೇದದಲ್ಲಿ ಕಸ್ತೂರಿ ದ್ರವ್ಯವನ್ನು ಜೀವ ರಕ್ಷಕ ಔಷಧಿ ಎಂದು ಹೇಳಲಾಗಿದೆ.
ನಿಶಾಚರಿ ಪ್ರಾಣಿ:
ಕಸ್ತೂರಿ ಮೃಗಗಳಲ್ಲಿ ಸುಮಾರು 13 ಪ್ರಭೇದಗಳೀವೆ. ಭಾರತ, ಚೀನಾ, ನೇಪಾಳ, ರಗಳಷ್ಯಾ ಸೇರಿದಂತೆ 13 ದೇಶಗಳಲ್ಲಿ ಇವುಗಳ ಸಂತತಿ ಕಂಡುಬರುತ್ತದೆ. 80ರಿಂದ 100 ಸೆಂ.ಮೀ. ಉದ್ದವಿದ್ದು, ಕೇವ ಮೂರು ಅಡಿ ಎತ್ತರವಾಗಿರುತ್ತದೆ. 7ರಿಂ 8 ಕೆ.ಜಿಯಷ್ಟು ತೂಕವಿರುತ್ತದೆ. ಇವು ನಾಚಿಕೆ ಸ್ವಭಾವದ ನಿಶಾಚರಿ ಜೀವಿಗಳು. ಸಾಮಾನ್ಯವಾಗಿ ಒಂಟಿಯಾಗಿಯೇ ಜೀವಿಸುತ್ತವೆ. ರಾತ್ರಿಯಿಂದ ಮುಂಜಾನೆಯವರೆಗೆ ಹುಲ್ಲು ಮೇಯುತ್ತದೆ. ಪ್ರತಿ ಕಸ್ತೂರಿ ಮೃಗವೂ ತನ್ನ ಪ್ರಾಂತ್ಯವನ್ನು ನಿಗದಿ ಮಾಡಿಕೊಂಡಿರುತ್ತದೆ. ಕೆಲವೊಮ್ಮೆ ಹೆಣ್ಣನ್ನು ಆಕರ್ಷಿಸಲು ಗಂಡು ಗಂಡಿನ ನಡುವೆ ಕಾಳಗವೂ ನಡೆಯುತ್ತದೆ. ಒರಟಾದ ಪ್ರದೇಶದಲ್ಲಿಯೂ ಸರಾಗವಾಗಿ ಒಡಾಡಬಲ್ಲದು. ಹಿಂಗಾಲುಗಳು ಮುಂಗಾಲಿಗಿಂತ ಉದ್ದವಾಗಿರುವುದರಿಂದ ಓಟಕ್ಕೂ ಸೈ!