ಜೀವನಯಾನ

Thursday, September 5, 2013

ಲಕ್ಷದ್ವೀಪ ಎಂಬ ಸುಂದರ ಕಡಲ ತೀರ

ಲಕ್ಷದ್ವೀಪ ಎನ್ನುವುದು ಹವಳದ ದಿಬ್ಬಗಳಿಂದ ಕೂಡಿದ ದ್ವೀಪ ಸಮೂಹ. ಆಳವಿರದ ಸಾಗರತಳದ ಪ್ರದೇಶಗಳಿಂದ ನಿರ್ಮಿತವಾಗಿರುವ ಪ್ರದೇಶ. ಪ್ರವಾಸಿಗರ ಪಾಲಿಗಂತೂ ಇದು ಭೂಮಿಯ ಮೇಲಿನ ಸ್ವರ್ಗ. ಸೂರ್ಯ ಹಾಗೂ ಮರಳಿನೊಂದಿಗೆ ಕಾಲಕಳೆಯಲು, ಹಾಯಾಗಿ ವಿಹರಿಸಲು  ಬಯಸುವವರಿಗಂತೂ ಇದು ನೆಚ್ಚಿನ ತಾಣ. ನಿಸರ್ಗದತ್ತ  ಸೌಂದರ್ಯ ಹಾಗೂ ಆಕರ್ಷಣೆಯೇ ಇದರ ಮೂಲ ಬಂಡವಾಳ.


39 ದ್ವೀಪಗಳ ಸಮೂಹ: 
ಲಕ್ಷದ್ವೀಪ ಎಂದ ಮಾತ್ರಕ್ಕೆ ಇಲ್ಲಿ ಒಂದು ಲಕ್ಷ ದ್ವೀಪಗಳಿವೆ ಎಂಬರ್ಥವಲ್ಲ. ವಾಸ್ತವವಾಗಿ ಇಲ್ಲಿರುವುದು ಬರೀ 39 ನಡುಗಡ್ಡೆ. ಈ ದ್ವೀಪ ಸಮೂಹದ ಒಟ್ಟೂ ವಿಸ್ತೀರ್ಣ ಕೇವಲ 32 ಚದರ್ ಕಿ.ಮೀ. ಒಂದು ಕಾಲದಲ್ಲಿ ಇದನ್ನು ಲಖದೀವ್, ಮನಿಕೋಯ್ ಮತ್ತು ಅಮಿನ್ ದಿವಿ ದ್ವೀಪಗಳು ಎಂದು ಕರೆಯಲಾಗುತ್ತಿತ್ತು. ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ಬ್ರೀಟಿಷರು ಲಕ್ಷದ್ವೀಪವನ್ನು ಭಾರತದ ಭೂ ಪ್ರದೇಶದೊಂದಿಗೆ ಸಂಯೋಜಿಸಿದರು. ಈ ದ್ವೀಪ ಸಮೂಹವನ್ನು ಒಂದು ಜಿಲ್ಲೆಯಾಗಿ ಪರಿಗಣಿಸಲಾಗಿದ್ದು, 10 ತಾಲೂಕುಗಳಾಗಿ ವಿಂಗಡಿಸಲಾಗಿದೆ. ಭಾರತದ ಕೇಂದ್ರಾಡಳಿತ ಪ್ರದೇಶಗಳಲ್ಲಿಯೇ ಅತ್ಯಂತ ಚಿಕ್ಕದು. ಲಕ್ಷದ್ವೀಪದ ರಾಜಧಾನಿ ಕವರಟ್ಟಿ. ಇಲ್ಲಿ 12 ಹವಳದ ದ್ವೀಪಗಳು, 3 ಹವಳದ ದಿಬ್ಬಗಳು, 5 ಆಳವಿರದ ಸಾಗರ ಪ್ರದೇಶ ಮತ್ತು 11 ಜನ ನಿಬಿಡ ದ್ವೀಪಗಳಿವೆ. ಜನರಿರುವ ದ್ವೀಪಳೆಂದರೆ, ಅಗಟ್ಟಿ, ಅಮಿನಿ, ಅನ್ಡ್ರೋಟ್, ಬಂಗಾರಂ, ಬಿತ್ರ, ಚೆತ್ಲಾತ್, ಕದ್ಮತ್, ಕಲ್ವೇನಿ, ಕವರಟ್ಟಿ, ಕಿಲ್ತಾನ್ ಮತ್ತು ಮನಿಕಾಯ್. ಪ್ರವಾಸೋದ್ಯಮದ ಜತಗೆ ಮೀನುಗಾರಿಕೆ ಲಕ್ಷದ್ವೀಪದ ಪ್ರಮುಖ ಉದ್ಯಮ. ಈ ದ್ವೀಪಗಳಲ್ಲಿ ಅಗಟ್ಟಿ ಹಾಗೂ ಬಂಗಾರಂ ಅತ್ಯಂತ ಪ್ರಮುಖ ಪಾತ್ರ ವಹಿಸಿವೆ.

ಜಲ ಕ್ರೀಡೆಗೆ ಹೆಸರುವಾಸಿ:
ಇಲ್ಲಿನ ಅನೇಕ ಆಕರ್ಷಕ ತಾಣಗಳು ನೋಡುಗರಿಗೆ ಅತ್ಯಂತ ಉತ್ತೇಜನಕಾರಿ. ರಜಾದಿನಗಳನ್ನು ಕಳೆಯಲು ಹೇಳಿಮಾಡಿಸಿದ ತಾಣ. ಮೀನುಗಾರಿಕೆಯ ಸ್ವಅನುಭವವನ್ನು ಪಡೆಯಬಹುದು. ಮನಸ್ಸಸಿನ ಒತ್ತಡವನ್ನು ಕಡಿಮೆಮಾಡಿಕೊಂಡು ನಿರಾಳರಾಗಬಹುದು. ಸ್ಕೂಬಾ ಡೈವಿಂಗ್ ತಾಣ ಕೂಡಾ ಇಲ್ಲಿನ ಪ್ರಮುಖ ಆಕರ್ಷಣೆ. ಇದು ಸದಾ ಚಟುವಟಿಕೆಯಿಂದ ಕುಡಿರುವ ತಾಣ. ಅಲ್ಲದೆ ನೀರಿನ ಆಳಕ್ಕೆ ಇಳಿದು ಈಜಲು, ನೀರಿಗೆ ಜಿಗಿಯಲು ಸಾಕಷ್ಟು ತಾಣಗಳು ಸಿಗುತ್ತವೆ.

ನೀಲಿ ಬಣ್ಣದ ಸರೋವರ:

ಸಮುದ್ರದ ನೀರಿನಿಂದ ನಿರ್ಮಾಣವಾದ ಸರೋವರಗಳು ನೀಲಿ ಬಣ್ಣದ್ದಾಗಿವೆ. ಕಡಲ ತೀರ ಕೂಡಾ ಅತ್ಯಂತ ಶುಭ್ರವಾಗಿದ್ದು, ಬಿಳಿ ಬಣ್ಣದಲ್ಲಿ ಸದಾ ಕಂಗೊಳಿಸುತ್ತವೆ.  ತೆಂಗು ಹಾಗೂ ಪಾಮ್ ಮರಗಳು ಸಾಲಾಗಿ ಬೆಳೆದು ನಿಂತಿದ್ದು, ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿವೆ.

ಜನಪ್ರಿಯ ದ್ವೀಪಗಳು
  • ಕವರಟ್ಟಿ ದ್ವೀಪ
ಲಕ್ಷ ದ್ವೀಪದ ಸಮೂಹದಲ್ಲಿಯೇ ಎಲ್ಲಾ ವಿಧದ ಮೋಜು ಮತ್ತು ಸಾಹಸಕ್ಕೆ ಕರವಟ್ಟಿ ಕೇಂದ್ರ ಸ್ಥಳವಾಗಿದೆ. ಈ ದ್ವೀಪ ಪುಟ್ಟ ಪಟ್ಟಣವಾಗಿದ್ದು, ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶದ ರಾಜಧಾನಿಯಾಗಿದೆ. ಅಲ್ಲದೆ ಕೆಲವು ಪಾರಂಪರಿಕ ತಾಣಗಳು ಇಲ್ಲಿವೆ. ಮ್ಯೂಸಿಯಂ ಹಾಗೂ ಮಸೀದಿ ಇವುಗಳಲ್ಲಿ ಪ್ರಮುಖವಾದವು. ಇಲ್ಲಿನ ಬೆಳ್ಳನೆಯ ಮರಳ ತೀರಗಳು ವರ್ಷಕ್ಕೆ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತವೆ.
  • ಅಗಟ್ಟಿ ನಡುಗಡ್ಡೆ.
ಲಕ್ಷದ್ವೀಪದ ಪ್ರವೇಶದ್ವಾರ ಅಂತಲೇ ಅಗಟ್ಟಿ ನಡುಗಡ್ಡೆ ಜನಪ್ರಿಯವಾಗಿದೆ. ಅಗಟ್ಟಿಯಲ್ಲಿ ಸ್ಥಳೀಯ ವಿಮಾನ ನಿಲ್ದಾಣವಿದೆ. 1988ರಲ್ಲಿ ಇಲ್ಲಿನ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಲಕ್ಷದ್ವೀಪಕ್ಕೆ ವಿಮಾನ ಸಂಪರ್ಕ ಕಲ್ಪಿಸುವ ಏಕೈಕ ದ್ವೀಪವೂ ಇದೇ ಆಗಿದೆ.
 
  • ಬಂಗಾರಂ ದ್ವೀಪ
ಇಲ್ಲಿ ತೆಂಗಿನ ಮರಗಳಿಂದ ಆವೃತ್ತವಾಗಿರುವ ಕಡಲ ತೀರ ಸುಮಾರು 120 ಎಕರೆ ಪ್ರದೇಶವನ್ನು ಆವಸಿದೆ. ಇಲ್ಲಿನ ಪ್ರಸಿದ್ಧ ಐಲ್ಯಾಂಡ್ ರೆಸಾರ್ಟ್ನೀರಿನೊಳಗಿನ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತದೆ. ಸ್ಕೂಬಾ ಹಾಗೂ ಸ್ಕೋರ್ಕಿಲ್ಲಿಂಗ್ ಅನುಭವ ಪಡೆಯಬಹುದು. ಕಡಲ ತೀರದಲ್ಲಿ ಬಿಳಿ ಬಣ್ಣದ ಅಲೆಗಳು ಮನಸೆಳೆಯುತ್ತವೆ. ತರಹೇವಾರಿ ಜಾತಿಯ ಪಕ್ಷಿಗಳು, ಮೀನುಗಳು, ಮುಳ್ಳಂದಿ, ಗಿಳಿ ಸಂಕುಲಗಳು ಗಮನ ಸೆಳೆಯುತ್ತದೆ.

 

No comments:

Post a Comment