ಪ್ರಾಣಿಗಳೆಂದರೆ ಅವು ನೀರನ್ನು ಅಗಲಿ ಬದುಕುವುದು ಸಾಧ್ಯವೇ ಇಲ್ಲ. ಆದರೆ, ಜೀವಿತಾವಧಿಯಲ್ಲಿ ಒಮ್ಮೆಯೂ ನೀರನ್ನು ಕುಡಿಯದ ಪ್ರಾಣಿಯೊಂದಿದೆ. ಅದೇ ಕಾಂಗರೂ ಇಲಿ! ಅಮೆರಿಕದ ಕ್ಯಾಲಿಫೋರ್ನಿಯಾ ಶುಶ್ಕ ಮರುಭೂಮಿಯಲ್ಲಿ ಇವು ಕಂಡುಬರುತ್ತವೆ. ಇದರ ಕಾಲು ಮತ್ತು ಬಾಲ ಆಸ್ಟ್ರೇಲಿಯಾದ ಕಾಂಗರೂಗಳನ್ನು ಹೋಲುತ್ತದೆ. ಅಲ್ಲದೆ ಇದು ಕಾಂಗರೂಗಳಂತೆ ನೆಗೆಯುತ್ತಾ ಓಡುತ್ತದೆ. ಹೀಗಾಗಿಯೇ ಇವುಗಳಿಗೆ ಕಾಂಗರೂ ಇಲಿ ಎನ್ನುವ ಹೆಸರು ಬಂದಿದೆ.
ನೀರನ್ನೇ ಕುಡಿಯುವುದಿಲ್ಲ!
ಕಾಂಗರೂ ಇಲಿಗಳು ಬಿಸಿಲಿನ ಮರುಭೂಮಿಯಲ್ಲಿ ವಾಸಿಸುವುದರಿಂದ ಅಲ್ಲಿನ ವಾತಾವರಣಕ್ಕೆ ಹೊಂದುವ ದೇಹರಚನೆ ಹೊಂದಿವೆ. ಅಲ್ಲಿನ ಸನ್ನಿವೇಶಕ್ಕೆ ತಕ್ಕಂತೆ ಹೊಂದಿಕೊಂಡಿವೆ. ಇವು ಜೀವಿತಾವಧಿಯಲ್ಲಿ ನೀರನ್ನು ಕುಡಿಯದಿದ್ದರೂ ಬದುಕುಳಿಯಬಲ್ಲದು! ಇವುಗಳ ಶ್ರವಣ ಸಾಮರ್ಥ್ಯ ಅಗಾಧವಾಗಿದೆ. ಗೂಬೆ, ಹಾವುಗಳು ಸದ್ದಿಲ್ಲದೆ ದಾಳಿ ಮಾಡುವುದನ್ನು ಸಹ ತಿಳಿದುಕೊಳ್ಳುತ್ತದೆ. ಹಿಂಗಾಲು ಉದ್ದವಾಗಿದ್ದು, ವೈರಿಗಳಿಂದ ತಪ್ಪಿಸಿಕೊಳ್ಳಲು 9 ಅಡಿ ಉದ್ದದ ವರೆಗೆ ನೆಗೆಯಬಲ್ಲದು.
ನೆಲದೊಳಗೆ ಸುಸಜ್ಜಿತ ಮನೆ!
ಕಾಂಗರೂ ಇಲಿಗಳು ಹೆಚ್ಚಾಗಿ ಭೂಮಿಯ ಅಡಿಗಳಲ್ಲೇ ಹೆಚ್ಚಾಗಿ ಇರುತ್ತವೆ. ಕುರುಚಲು ಪೊದೆ, ಹುಲ್ಲುಗಳಿರುವ ಬಯಲು ಪ್ರದೇಶ, ಮರಳು ಗುಡ್ಡೆ, ಮರದ ಪೊಟರೆ ಮುಂತಾದ ವೈವಿಧ್ಯಮಯ ಗೂಡುಗಳಲ್ಲಿ ವಾಸಿಸುತ್ತವೆ. ಬಿಲವನ್ನು ನಾವು ವಾಸಿಸುವ ಮನೆಯಂತೆಯೇ ವ್ಯವಸ್ಥಿತ ರೀತಿಯಲ್ಲಿ ನಿರ್ಮಿಸಿಕೊಂಡಿರುತ್ತದೆ. ಬಿಲದಲ್ಲಿ ಪ್ರತ್ಯೇಕ ಭೋಜನ ಕೋಣೆ, ಮಲಗುವ ಕೋಣೆ, ಆಹಾರ ಸಂಗ್ರಹ ಕೋಣೆಗಳನ್ನು ಹೊಂದಿರುತ್ತದೆ. ಸುಡುಬಿಸಿಲಿನ ಹಗಿನ ವೇಳೆಯಲ್ಲಿ ಬಿಲವನ್ನು ತಂಪಾಗಿರಿಸಲು ಬಿಲದ ಬಾಗಿಲನ್ನು ಮಣ್ಣಿನಿಂದ ಮುಚ್ಚಿಡುತ್ತದೆ. ರಾತ್ರಿ ಮರುಭೂಮಿ ತಂಪಾದಾಗ ಬಾಗಿಲನ್ನು ತೆರೆಯುತ್ತದೆ. ದಿನದ ಬಹುತೇಕ ಸಮಯ ಬಿಲದಲ್ಲಿ ನಿದ್ರಿಸುವುದರಲ್ಲೇ ಕಳೆಯುತ್ತದೆ. ರಾತ್ರಿಯಹೊತ್ತು ವಾತಾವರಣ ತಣ್ಣಗಾದ ಬಳಿಕ ಆಹಾರ ಸೇವನೆಗಾಗಿ ಬಿಲದಿಂದ ಹೊರಗೆ ಬರುತ್ತವೆ. ಹವಾಮಾನ ವೈಪರೀತ್ಯಗಳು ಉಂಟಾದಾಗ ಬಿಲದಲ್ಲಿಯೇ ಇದ್ದುಬಿಡುತ್ತವೆ.
ಮೈ ಬೆವರುವುದೇ ಇಲ್ಲ!
ಕಾಂಗರೂ ಇಲಿ ಬೆವರಿನ ಮೂಲಕ ಬಿಡುಗಡೆಯಾಗುವ ತೇವಾಂಶವನ್ನು ಉಸಿರಿನ ಮೂಲಕ ಪುನಃ ಹೀರಿಕೊಳ್ಳುತ್ತದೆ. ಹೀಗಾಗಿ ಕಾಂಗರೂ ಇಲಿ ಬೆವರುವುದೇ ಇಲ್ಲ. ಅಲ್ಲದೆ ದೇಹದಿಂದ ಹೊರಹೋಗುವ ನೀರಿನ ಅಂಶ ವರ್ಥವಾಗುವುದಿಲ್ಲ. ದೇಹದಷ್ಟೇ ದೊಡ್ಡ ತಲೆ, ಅಗಲವಾದ ಕಣ್ಣು, ಚಿಕ್ಕಕಿವಿ. ಉದ್ದನೆ ಹಿಂಗಲು, ಪುಟ್ಟ ಮುಂಗಾಲು, ಉದ್ದನೆಯ ಬಾಲ ಇವು ಕಾಂಗರೂ ಸ್ಥೂಲ ದೇಹರಚನೆ. ಇದರ ದೇಹದ ಉದ್ದ 3 ರಿಂದ 5 ಇಂಚು. ಬಾಲ ದೇಹಕ್ಕಿಂತಲೂ ದೊಡ್ಡ ಅಂದರೆ, 5ರಿಂದ 6 ಇಂಚು ಉದ್ದವಿರುತ್ತದೆ. ಕಾಂಗರೂ ಇಲಿಯ ಮೈ ಮರಳಿನ ಕಂದು ಬಣ್ಣ ಮತ್ತು ಹೊಟ್ಟೆಯ ಭಾಗ ಬಿಳಿಯಾಗಿದೆ. ಜೀವಿತಾವಧಿ 2 ರಿಂದ 5 ವರ್ಷ. ಕಾಂಗರೂ ಇಲಿಗಳಲ್ಲಿ ಹೆಣ್ಣಿಗಿಂತ ಗಂಡು ಇಲಿ ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಕಾಂಗರೂ ಇಲಿಗೆ ಹಾವು, ಗೂಬೆ, ನರಿ ಸೇರಿದಂತೆ ಸುತ್ತಮುತ್ತ ಹಲವಾರು ಶತ್ರುಗಳಿದ್ದರೂ. ಅವಸಾನದ ಅಂಚಿಗೆ ತಲುಪಿಲ್ಲ ಈಗಲೂ ಇವು ಹೆಚ್ಚಿನ ಸಂಖ್ಯೆಯಲ್ಲಿವೆ.
ಯಾಕೆ ನೀರು ಕುಡಿಯಲ್ಲ?
ಕಾಂಗರೂ ಇಲಿ ಕೂಡಾ ಮರುಭೂಮಿಯ ಪ್ರಾಣಿಯಾಗಿರುವುದರಿಂದ ಅದು ತಿನ್ನುವ ಸಸ್ಯದ ಬೇರು ಮತ್ತು ಬೀಜಗಳಿಂದ ದೇಹಕ್ಕೆ ಬೇಕಾದ ತೇವಾಂಶವನ್ನು ದೊರಕಿಸಿಕೊಳ್ಳುತ್ತದೆ. ಅದರ ಆಹಾರವೇ ಅದಕ್ಕೆ ನೀರು ಒದಗಿಸುವ ಕಾರಣ ಪ್ರತ್ಯೇಕವಾಗಿ ನೀರು ಕುಡಿಯುವ ಅಗತ್ಯವಿಲ್ಲ. ಇವು ಕಾಂಗರೂಗಳಂತಯೇ ಚರ್ಮದ ಚೀಲಗಳನ್ನು ಹೊಂದಿರುತ್ತದೆ. ಆದರೆ, ಅದರಲ್ಲಿ ಮರಿಗಳನ್ನು ಸಾಕುವ ಬದಲು ಆಹಾರದ ಸಂಗ್ರಹಕ್ಕೆ ಬಳಸುತ್ತದೆ.