ಬಾಹ್ಯಾಕಾಶದಲ್ಲಿ ಬದುಕಬಲ್ಲ, ಎಂಥಹ ವಿಷಮ ಪರಿಸ್ಥಿತಿಯಲ್ಲೂ ಜೀವಿಸಬಲ್ಲ ಜೀವಿ ಇದೆಯೇ? ಜಿರಳೆಗಳು ಅಣು ಸ್ಫೋಟವನ್ನೂ ಸಹಿಸಬಲ್ಲವು ಎಂಬ ಮಾತಿದೆ. ಆದರೆ, ಅವುಗಳನ್ನೂ ಮೀರಿಸುವ ವಿಚಿತ್ರ ಪ್ರಾಣಿಯೊಂದರ ಬಗ್ಗೆ ನಿಮಗೆ ಗೊತ್ತೇ? ಹೌದು, ಹೀಗೊಂದು ಜೀವಿ ಇದೆ. ಇದು ಜಗತ್ತಿನ ಅತ್ಯಂತ ಸುರಕ್ಷಿತ ಜೀವಿ ಎಂದೇ ಪರಿಗಣಿಸಲ್ಪಟ್ಟಿದೆ. ಬಹುಶಃ ಯಾರೂ ಇದನ್ನು ನೋಡಿರಲಾರರು, ಕೈಯಲ್ಲಿ ಮುಟ್ಟಿರಲಾರರು ಅಥವಾ ಇದರ ಪರಿಚಯವೇ ಇಲ್ಲದೇ ಇರಬಹುದು. ನಿಸರ್ಗದಲ್ಲಿ ಅತ್ಯಧಿಕ ವರ್ಷ ಬದುಕುವ ಏಕೈಕ ಪ್ರಾಣಿ ಎನ್ನುವ ಹೆಗ್ಗಳಿಕೆಯೂ ಇದಕ್ಕಿದೆ. ಈ ಜೀವಿಯೇ ಟಾಡ್ರಿಗೇಟ್ ಅಥವಾ ಜಲ ಕರಡಿ!
ಮೈಕ್ರೋಸ್ಕೋಪ್ ನಿಂದಲೇ ನೋಡಬೇಕು!
ಇದೊಂದು ಸೂಕ್ಷ್ಮ ಜೀವಿ. ಇದರ ಗಾತ್ರ ಕೇವಲ 0.3 ಮಿಲಿ ಮೀಟರ್ನಿಂದ 0.5 ಮಿಲಿ ಮೀಟರ್. ಮೈಕ್ರೊಸ್ಕೋಪ್ ಬಳಸಿಯೇ ಇದನ್ನು ನೋಡಬೇಕು. ಎಂತದ್ದೇ ಕಠಿಣ ಪರಿಸ್ಥಿತಿಯಲ್ಲೂ ಆನಂದದಿಂದ ಜೀವಿಸುವ ಪ್ರಾಣಿಯೊಂದು ಭೂಮಿಯ ಮೇಲೆ ಇದ್ದರೆ ಅದು ಜಲಕರಡಿ ಮಾತ್ರ. ಈ ವಿಚಿತ್ರ ಜೀವಿಯನ್ನು ಗೊಟ್ಜ್ ಎಂಬ ವಿಜ್ಞಾನಿ 1773ರಲ್ಲಿ ಕಂಡುಹಿಡಿದ.
ಬಾಹ್ಯಾಕಾಶದಲ್ಲಿಯೂ ಬದುಕಬಲ್ಲದು!
ಈ ಸಣ್ಣ ಆಕರ್ಷಕ ಪ್ರಾಣಿಗಳಲ್ಲಿ ಸುಮಾರು 900ಕ್ಕೂ ಹೆಚ್ಚು ಪ್ರಭೇದಗಳಿವೆ. ಇವು ಎತ್ತರದ ಪರ್ವತಗಳಿಂದ ಹಿಡಿದು ಆಳದ ಸಮುದ್ರಗಳಲ್ಲಿಯೂ ಕಂಡುಬರುತ್ತದೆ. ಅಷ್ಟೇಅಲ್ಲ ಅಂತರಿಕ್ಷಕ್ಕೆ ತೆಗೆದುಕೊಂಡುಹೋಗಿ ಬಿಟ್ಟುಬಂದರೂ ಹಾಯಾಗಿ ತೇಲಾಡಿಕೊಂಡಿರುತ್ತದೆ. ನೀರಿಲ್ಲಿ ಕುದಿಸಿದರೂ, ಹೆಪ್ಪುಗಟ್ಟಿಸಿದರೂ, ಒತ್ತಡದಿಂದ ಅದುಮಿದರೂ ಇವಕ್ಕೆ ಏನೂ ಆಗುವುದಿಲ್ಲ. ಏಕೆಂದರೆ ಇದರ ದೇಹ ರಚನೆಯೇ ವಿಶಿಷ್ಟ. ವಿಜ್ಞಾನಿಗಳಿಗೂ ಈ ಬಗ್ಗೆ ಹೆಚ್ಚೇನೂ ತಿಳಿದಿಲ್ಲ. ಸಿಲಿಂಡರ್ ಆಕಾರದ ದೇಹ ಹೊಂದಿರುವ ಇವುಗಳಿಗೆ ಮೋಟಾದ 8 ಕಾಲುಗಳಿವೆ. ಪ್ರತಿ ಕಾಲಿನ ಪಾದದಲ್ಲಿ ಚಿಕ್ಕದಾದ 4-8 ಉಗುರುಗಳಿವೆ. ಹರಿತವಾದ ವಸ್ತುವಿನಂತಿರುವ ಬಾಯಿಯನ್ನು ಹೊಂದಿದೆ. ಚಿಕ್ಕದಾಗಿದ್ದರೂ ನೋಡಲು ಕರಡಿಯಂತೆ ಕಾಣುವುದರಿಂದ ಜಲಕರಡಿ ಎಂದು ಅನ್ವರ್ಥಕನಾಮ ಪಡೆದುಕೊಂಡಿದೆ.
ಅಣು ಸ್ಫೋಟ ಎದುರಿಸಬಲ್ಲದು!
ಈ ಜಲಕರಡಿ 357 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವನ್ನೂ ತಡೆದುಕೊಳ್ಳಬಲ್ಲದು. ಅದೇರೀತಿ - 457 ಡಿಗ್ರಿಗಿಂತ ಕಡಿಮೆ ತಾಪಮಾನವನ್ನೂ ಸಹಿಸಬಲ್ಲದು. ನೀರಿಲ್ಲದೇ ದಶಕಗಳ ಕಾಲ ಬದುಕಬಲ್ಲದು. ಏನಿಲ್ಲವೆಂದರೂ 200ಕ್ಕೂ ಹೆಚ್ಚುಕಾಲ ಇವು ಬದುಕುತ್ತವೆ. ಮನುಷ್ಯಸೇರಿದಂತೆ ಎಲ್ಲಾ ಪ್ರಾಣಿಗಳು 10-20 ರಷ್ಟು ಪ್ರಮಾಣದ ವಿಕಿರಣದಲ್ಲಿ ಸರ್ವನಾಶವಾಗುತ್ತವೆ. ಆದರೆ, ಟಾಡ್ರಿಗೇಟ್ ಮಾತ್ರ 5,700 ಪ್ರಮಾಣದ ವಿಕಿರಣವನ್ನೂ ಸಹಿಸುವ ಸಾಮಥ್ರ್ಯ ಹೊಂದಿದೆ. ಅಂದರೆ ಅಣುಸ್ಫೋಟವನ್ನು ಸಹ ಇವು ಎದುರಿಸಬಲ್ಲವು.
ವಿಶಿಷ್ಟ ಜೀವನ ಚಕ್ರ
ಇವು ಕೇವಲ ಸಸ್ಯ ಜೀವಕೋಶ, ಸಮುದ್ರ ಪಾಚಿ ಮತ್ತು ಸೂಕ್ಷ ಜೀವಿಗಳನ್ನು ತಿನ್ನುವದರಿಂದ ಅವುಗಳಿಗೆ ಈ ರೀತಿಯ ಬಲ ಬಂದಿದೆ ಎಂದು ಹೇಳಲಾಗಿದೆ. ಕೆಲವು ಜಲ ಕರಡಿಗಳು ಪ್ರತಿಜೀವಾಣು (ಆಂಟಿಬಯಾಟಿಕ್) ರೂಪದಲ್ಲಿ ಅನೇಕ ವರ್ಷಗಳಕಾಲ ಇರಬಲ್ಲದು. ಇವು ಬೆಳವಣಿಗೆ ಹೊಂದಿದ ಪ್ರಜಾತಿ ಆಧರಿಸಿ ವಿವಿಧ ಬಣ್ಣ ಮತ್ತು ಆಕಾದಲ್ಲಿ ಕಂಡುಬರುತ್ತವೆ. ಬೂದು, ನೀಲಿ ಹಳದಿ-ಕಂದು, ಕೆಂಪು ಬಣ್ಣಗಳನ್ನು ಇವು ಹೊಂದಿರುತ್ತವೆ. ಗಂಡಿಗಿಂತಲೂ ಹೆಣ್ಣು ಹೆಚ್ಚಿನ ಸಂಖ್ಯೆಯಲ್ಲಿರುತ್ತದೆ. ಜತೆಗೆ ಆಕಾರದಲ್ಲಿಯೂ ದೊಡ್ಡದು. ಅದು ತನ್ನ ಮೊಟ್ಟೆಗಳನ್ನು ಪೊರೆಯಲ್ಲಿ ಇರಿಸುತ್ತದೆ. ಈ ಮೊಟ್ಟೆಗಳು ಅನೇಕಬಾರಿ ರೂಪಾಂತರಗೊಂಡ ಬಳಿಕ ಪ್ರೌಢಾವಸ್ಥೆಗೆ ಬರುತ್ತದೆ. ಇದರ ಜೀವಕೋಶ ಇತರ ಯಾವುದೇ ಪ್ರಾಣಿಗಳಿಗೂ ಹೊಂದಿಕೆಯಾಗುವುದಿಲ್ಲ.
No comments:
Post a Comment