ಜೀವನಯಾನ

Friday, March 22, 2013

ಮುಟ್ಟಿದರೆ ಮುನಿಯುವ ನಾಚಿಕೆ ಮುಳ್ಳು!

ಈಗಿಡಕ್ಕೆ ಮೈತುಂಬಾ ಮುಳ್ಳು. ಎಲೆಗಳನ್ನು ಮುಟ್ಟಿದೊಡನೆ ಮುದುಡಿಕೊಳ್ಳುವ, ಸ್ಪರ್ಶ ತಾಕಿದೊಡನೆ ನಾಚಿಕೆಂಪಾಗಿ ಮುಸುಕೊದ್ದು ಕುಳಿತಂತೆ ವತರ್ಿಸುವ ಸ್ವಭಾವ. ಇದು ತನ್ನನ್ನು ತಾನು ರಕ್ಷಿಸಿಕೊಳ್ಳಲು ಮುಟ್ಟಿದರೆ ಮುನಿ ಗಿಡ ಅಳವಡಿಸಿಕೊಂಡಿರುವ ತಂತ್ರ. ಕೈಬೆರಳಿನ ತುದಿತಾಕಿದರೂ ನಿಧಾನವಾಗಿ ಒಂದೊಂದೇ ಎಲೆಗಳನ್ನು ಮಡಚಿಕೊಳ್ಳುತ್ತಾ ಸಂಪೂರ್ಣ ಸಸ್ಯವೇ ನಿರ್ಜೀವವಾಗುವ ಪರಿ ನಿಜಕ್ಕೂ ಅನನ್ಯ. ಈ ವಿಶಿಷ್ಟ ಪ್ರಕ್ರಿಯೆ ಮಕ್ಕಳಿಂದ ಹಿಡಿದು ವಿಜ್ಞಾನಿಗಳಿಗೂ ಕುತೂಹಲ ಕೆರಳಿಸುತ್ತದೆ. ಈ ಗಿಡ ಇಂದಿಗೂ ಪ್ರಕೃತಿಯ ರಹಸ್ಯವಾಗಿಯೇ ಉಳಿದಿದೆ.


ಮುಟ್ಟಿದರೆ ಮುನಿ ಎಂಬುದಕ್ಕೆ ಪರ್ಯಾ ಯವಾಗಿ ಇಂಗ್ಲಿಷ್ ನಲ್ಲಿ "ಟಚ್ ಮಿ ನಾಟ್" ಎಂದು ಕರೆಸಿಕೊಂಡಿದೆ. ಆಡುಭಾಷೆಯಲ್ಲಿ ನಾಚಿಕೆ ಮುಳ್ಳು, ಲಚ್ಚಾವತಿ ಎಂದೆಲ್ಲಾ ಕರೆಸಿಕೊಳ್ಳುವ ಈ ಸಸ್ಯ ತೋಟ, ಗದ್ದೆಗಳಲ್ಲಿ ಕಳೆಯಂತೆ ಬೆಳೆಯುತ್ತದೆ. ಸಸ್ಯಶಾಸ್ತ್ರದಲ್ಲಿ ಇದಕ್ಕೆ ಮಿಮೊಸಾ ಪುಡಿಕಾ  ಎಂದು ವೈಜ್ಞಾನಿಕವಾದ ಹೆಸರಿದೆ. ಸಂಸ್ಕೃತದಲ್ಲಿ ಅಂಜಿಲಿ ಕಾರಿಕೆ ಎಂದು ಹೆಸರು. ನೋಟದಲ್ಲೇ ಮನಸೂರೆಗೊಳ್ಳಯವ ಈ ಗಿಡ ಜಗತ್ತಿನೆಲ್ಲೆಡೆ ಕಂಡುಬರುತ್ತದೆ. ಇದರ ಮೂಲ ದಕ್ಷಿಣ ಹಾಗೂ ಮಧ್ಯ ಅಮೆರಿಕ.

ಆತ್ಮ ರಕ್ಷಣಾ ತಂತ್ರ
ಈ ಸಸ್ಯ ಹಸಿರು ಹುಲ್ಲು ಮೇಯುವ ಪ್ರಾಣಿಗಳಿಗೆ ಉತ್ತಮ ಆಹಾರವಾಗಿದ್ದು, ಹಸಿರಿನಿಂದ ಕಂಗೊಳಿಸುವ ಈ ಸಸ್ಯವನ್ನು ನೋಡಿದಾಗ ಮೇಯಲು ಧಾವಿಸುತ್ತವೆ. ಆಗ ತನ್ನನ್ನು ರಕ್ಷಿಸಿಕೊಳ್ಳಲು ಮುದುರಲು ಆರಂಭಿಸುತ್ತದೆ. ಇಂದಕ್ಕೊಂದು ತಗಲುತ್ತಾ ಕ್ಷಣಮಾತ್ರದಲ್ಲಿ ವಿಶಾಲ ಪ್ರದೇಶದಲ್ಲಿ ಹರಡಿದ್ದ ಈ ಸಸ್ಯ ಸಮೂಹವೇ ಮುದುಡಿಕೊಳುತ್ತದೆ. ಇದರಿಂದ ಮೇಯಲು ಬಂದ ಪ್ರಾಣಿಗಳಿಗೆ ಅಲ್ಲಿ ಕೇವಲ ಒಣಗಿದ ಸಸ್ಯಗಳು ಇದ್ದಂತೆ ಭಾಸವಾಗುತ್ತವೆ. ಹೀಗಾಗಿ ಈ ಹೊಲವನ್ನು ಅವು ತ್ಯಜಿಸಿ ಬೇರೆಡೆಗೆ ಹೋಗುತ್ತವೆ. ಬಳಿಕ ಕೆಲವು ನಿಮಿಷದಲ್ಲೇ ಅರಳಿನಿಂತು ಹಸಿರಿನಿಂದ ಕಂಗೊಳಿಸುತ್ತವೆ.


ಬಾಡುವುದಕ್ಕೆ ಏನು ಕಾರಣ?
ಮುಟ್ಟಿದರೆ ಮುನಿಯಲ್ಲಿ ಎರಡು ವಿಧಗಳಿದ್ದು, ಒಂದು ಹೊರ ಮುದುಡುವಿಕೆ  ಹಾಗೂ ಒಳ ಮುದುಡುವಿಕೆಹೊಂದಿದ ಸಸ್ಯಗಳಿವೆ. ಗಿಡ ಬಾಡುವುದಕ್ಕೆ ಇದರ ನಾಚಿಕೆ ಸ್ವಭಾವ ಕಾರಣವಲ್ಲ. ಬದಲಾಗಿ ಈ ಗಿಡದ ಜೀವಕೋಶಗಳು ಸೂಕ್ಷ್ಮವಾಗಿದ್ದು, ಕಿಂಚಿತ್ ಒತ್ತಡ ವ್ಯತ್ಯಾಸವಾದರೂ ಮಡಚಿಕೊಂಡು ಬಿಡುತ್ತೆ. ಸಸ್ಯ ಶಾಸ್ತ್ರಜ್ಞರು ಇದೊಂದು ರಕ್ಷಣಾ ತಂತ್ರ ಎಂದು ಕರೆದಿದ್ದಾರೆ. ಹುಳಹಪ್ಪಟೆಗಳಿಂದ ಹಿಡಿದು ಮೇಯಲು ಬಂದ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ಎಲೆಗನ್ನು ಮಡಚಿಕೊಳ್ಳುತ್ತದೆ. ಇದರಿಂದ ಗಿಡದ ಮುಳ್ಳುಗಳು ಪ್ರಾಣಿಗಳಿಗೆ ಚುಚ್ಚಿಕೊಳ್ಳುತ್ತವೆ.


ಬೇರಿನಿಂದ ಬೆಳೆಯುತ್ತದೆ

ಇದೊಂದು ದೀರ್ಘಾವಧಿಯ ಕಳೆಗಿಡ. ಗಿಡವು ತಿಳಿ ನೇರಳೆಬಣ್ಣದ ಆಕರ್ಶಕ ಹೂವು ಬಿಡುತ್ತದೆ. ಒಂದು ಗಿಡದಿಂದ ವರ್ಷಕ್ಕೆ ಸುಮಾರು ಒಂದು ಲಕ್ಷದಷ್ಟು  ಬೀಜ ಉತ್ಪತ್ತಿಯಾಗುತ್ತದೆ. ಆದರೆ, ಬೀಜವಿಲ್ಲದಿದ್ದರೂ ಭೂಮಿಯೊಳಗೆ ಬೇರುಗಳು ಹಬ್ಬಿ ಬೆಳವಣಿಗೆ ಹೊಂದುತ್ತದೆ. ಬೇರುಗಳ ಸಹಾಹದಿಂದ ಅಭಿವೃದ್ಧಿ  ಹೊಂದುವುದರಿಂದ ಮೇಲಿನ ಭಾಗವನ್ನು ಕತ್ತರಿಸದರೂ ಮತ್ತೆ ಬೆಳೆದುನಿಲ್ಲುತ್ತದೆ. ಕಳೆನಾಶಕಗಳನ್ನು ಸಿಂಪಡಿಸಿದರೂ ನಾಶವಾಗುವುದಿಲ್ಲ.

ಅಗಾಧ ಔಷಧಿಯ ಗುಣ:

ಮುಟ್ಟಿದರೆ ಮುನಿಗಿಡದ ಎಲೆ,  ಹೂವು ಕಾಂಡ ಹಾಗೂ ಬೇರು ಎಲ್ಲವೂ ಔಷಧಿಯ ಗುಣ ಹೊಂದಿದೆ. ಸಾಮಾನ್ಯವಾಗಿ ಶೀತವಾದರೆ ಇದು ಉತ್ತಮ ಮದ್ದು. ಗಾಯವಾಗಿ ರಕ್ತಸ್ರಾವವಾಗಿದ್ದರೆ ಇದರ ಎಲೆಗಳನ್ನು ಜಜ್ಜಿ ಹಚ್ಚಿದರೆ ರಕ್ತಸೋರುವುದು ಕೂಡಲೇ ನಿಲ್ಲುತ್ತದೆ. ಮೂಲವ್ಯಾಧಿ, ಕಾಲರಾ ಮತ್ತು ಸಾಮಾನ್ಯ ವಾಂತಿಭೇದಿಗೂ ಮುಟ್ಟಿದರೆ ಮುನಿಗಿಡ ಉತ್ತಮ ಔಷಧಿ. ಆದರೆ ಇದರಿಂದ ಅಪಾಯವೂ ಇದೆ. ಮುಳ್ಳಿನಲ್ಲಿ ನಂಜಿನ ಅಂಶಹೆಚ್ಚಾಗಿರುವುದರಿಂದ ಮಕ್ಕಳಿಗೆ ಚುಚ್ಚಿದರೆ ಅಪಾಯವಾಗುವ ಸಂಭವವಿರುತ್ತದೆ.
 

Friday, March 15, 2013

ಹೆಂಡಗುಡುಕ ಪ್ರಾಣಿ ಪೆನ್ ಟೇಲ್ಡ್ ಟ್ರೀ ಶ್ರೂ!


ಮನುಷ್ಯರಂತೆ ಪ್ರಾಣಿಯೂ ಹೆಂಡ ಕುಡಿಯುತ್ತೆ. ಜಗತ್ತಿನಲ್ಲಿಯೇ ಮಹಾನ್ ಹೆಂಡಗುಡುಕನೆಂಬ ಬಿರುದನ್ನೂ ಸಹ ಪಡೆದುಕೊಂಡಿದೆ. ಈ ಹೆಂಡಗುಡುಕನ ಹೆಸರು ಪೆನ್ ಟೇಲ್ಡ್ ಟ್ರೀ ಶ್ರೂ! ಇದರೊಂದಿಗೆ ಪೈಪೋಟಿಗೆ ನಿಂತರೆ ಮನುಷ್ಯರು ಕೂಡಾ ಹಿಂದೆ ಬೀಳುವುದು ಖಂಡಿತ. ಇಲಿಯ ಆಕಾರದ ಈ ಸಸ್ತನಿಗೆ ರಾತ್ರಿಯ ಹೊತ್ತು ಹೆಂಡ ಕುಡಿಯದೇ ನಿದ್ದೆಯೇ ಬರುವುದಿಲ್ಲವಂತೆ. 


ದೇವರು ಮಾಡಿದ ಬಾರು!
ಪ್ರತಿದಿನ ಕನಿಷ್ಠವೆಂದರೂ ಎರಡು ತಾಸನ್ನು ಹೆಂಡ ಕುಡಿಯುವುದಕ್ಕೆ ಮೀಸಲಿಡುತ್ತವೆ ಪೆನ್ ಟೇಲ್ಡ್ ಟ್ರೀ ಶ್ರೂ. ಹಾಗಂತ ಇವು ಬಿಯರ್ ಬಾಟಲಿಗೆ ಕೈ ಹಾಕುವುದಿಲ್ಲ. ಇವುಗಳಿಗಾಗಿ ದೇವರೇ ಬಾರನ್ನು ನಿರ್ಮಿಸಿಕೊಟ್ಟಿದ್ದಾನೆ! ಬೆರ್ಟೆಮ್ ಜಾತಿಯ ತಾಳೆ ಮರಗಳಲ್ಲಿ ನೈಸರ್ಗಿಕವಾಗಿ ಮಕರಂದದ ರೂಪದಲ್ಲಿ ಮದ್ಯ ಶೇಖರಣೆಗೊಂಡಿರುತ್ತದೆ. ಟ್ರೀ ಶ್ರೂ ರಾತ್ರಿಯಾಗುತ್ತಿದಂತೆ ತಾಳೆಮರಗಳ ಮೊಗ್ಗಿನಲ್ಲಿ ಅಡಗಿರುವ ಮದ್ಯ ಹೀರಲು ಶುರುಹಚ್ಚಿಕೊಳ್ಳುತ್ತವೆ. ಈ ತಾಳೆ ಮರಗಳ ಹೂವಿನ ಮಕರಂದ 8.3ರಷ್ಟು ಮದ್ಯದ ತಾಕತ್ತು ಹೊಂದಿರುತ್ತದೆ. ಅಂದರೆ ಇದರ ಪ್ರಮಾಣ ಅನೇಕ ಬಿಯರ್ ಬಾಟಲಿಗೆ ಸಮ. ಮನುಷ್ಯ ಕಂಟಗಟ್ಟಲೆ ಕುಡಿಯುವಷ್ಟೇ ಮದ್ಯವನ್ನು ಇವು ಕೂಡಾ ಸೇವಿಸುತ್ತವೆ. ಆದರೆ ಬಾಟಲಿಯ ಲೆಕ್ಕದಲ್ಲಿ ಅಲ್ಲ. ಎಷ್ಟೇ ಹೆಂಡ ಕುಡಿದರೂ ಟ್ರೀ ಶ್ರೂಗಳಳಿಗೆ ಅಮಲು ಏರುವದೇ ಇಲ್ಲ. ಮನುಷ್ಯರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಜೀರ್ಣಿಸಿಕಕೊಳ್ಳುವ ತಾಕತ್ತು ಟ್ರೀ ಶ್ರೂಗಳಿಗೆ ಇದೆ. ಪ್ರತಿದಿನ ರಾತ್ರಿ ಕನಿಷ್ಠವೆಂದರೂ 12 ಗ್ಲಾಸಿನಷ್ಟು ವೈನ್ ಗಳನ್ನು ತಾಳೆ ಮರದಿಂದ ಹೀರುತ್ತವೆ. ಹೀಗೆ ಮದ್ಯಪಾನ ಮಾಡಿದಾಗ ಇವು ತಮ್ಮ ತೂಕ ಹೆಚ್ಚಿಸಿಕೊಳ್ಳುತ್ತದೆ.



ಶಾಯಿ ಪೆನ್ನಿನ ಆಕಾರದ ಬಾಲ
ಈ ವಿಶಿಷ್ಟ ಹೆಂಡಗುಡುಕ ಪ್ರಾಣಿಯನ್ನು ಇಂಡೋನೇಷಿಯಾ, ಮಲೆಷಿಯಾ ಮತ್ತು ಥೈಲ್ಯಾಂಡ್ ನ ಅರಣ್ಯಗಳಲ್ಲಿ ಕಾಣಬಹುದಾಗಿದೆ. ಇವು ಹಳೆಯ ಸ್ಕಾಂಡೆಂಟಿಯಾ ಪ್ರಭೇದಕ್ಕೆ ಸೇರಿದೆ. ಇದರಲ್ಲಿ ಸುಮಾರು 20 ಜಾತಿಗಳಿವೆ. ಇವು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುತ್ತವೆ. ನದಿ ಕೆರೆಗಳು ಕಂಡರೆ ಪದೇ ಪದೇ ಸ್ನಾನ ಮಾಡುತ್ತವೆ. ದೇಹಕ್ಕಿಂತಲೂ ದೊಡ್ಡದಾಗಿರುವ ಇದರ ಬಾಲ 7 ವರೆ ಇಂಚಿನಷ್ಟು  ಉದ್ದವಾಗಿರುತ್ತದೆ. ಇದರ ಬಾಲ ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಶಾಯಿಬಾಟಲಿಯಲ್ಲಿ ಅದ್ದಿದ ಗರಿಗಳುಳ್ಳ ಲೇಖನಿಯ ರೀತಿಯಲ್ಲಿ ಇರುವುದರಿಂದ ಪೆನ್ ಟೇಲ್ಡ್ ಎನ್ನುವ ಹೆಸರು ಬಂದಿದೆ. ಅದೇರೀತಿ ಮರಗಳಮೇಲೆಯೇ ಹೆಚ್ಚಾಗಿ ವಾಸಮಾಡುವುದರಿಂದ ಟ್ರೀ ಶ್ರೂ ಎಂದು ಕರೆಸಿಕೊಂಡಿದೆ. ಚೋಟುದ್ದ ಇರುವ ಇದಕ್ಕೆ ಮಾರುದ್ದದ ಬಾಲ ಯಾತಕ್ಕೆ ಎಂದು ಕೇಳಬೇಡಿ. ಬಾಲದಿಂದಲೂ ಉಪಯೋಗವಿದೆ. ಟ್ರೀ ಶ್ರೂ ಮರ ಹತ್ತುವುದರಲ್ಲಿ ಭಲೇ ನಿಪುಣ. ಉದ್ದನೆಯ ಬಾಲವನ್ನು ಬೆಲೆನ್ಸ್ ಮಾಡುತ್ತಾ ಎಂಥಾ ಮರವನ್ನಾದರೂ ಹತ್ತಿ ಹೆಂಡ ಕುಡಿಯುತ್ತದೆ.

ಹೆಂಡ ಹೀರಲು ಮರಗಳೇ ಸಿಗುತ್ತಿಲ್ಲ
ಬರಿ ಹೆಂಡ ಕುಡಿಯುವುದರಿಂದ ಇದರ ಹೊಟ್ಟೆ ತುಂಬುವುದಿಲ್ಲ. ಹೀಗಾಗಿ ಕೀಟ, ಇಲಿ, ಸಣ್ಣಹಕ್ಕಿ, ಹಲ್ಲಿಗಳನ್ನೂ ಇವು ತಿನ್ನುತ್ತವೆ. ಇವು ಹೆಚ್ಚಾಗಿ ಗುಂಪಾಗಿ ವಾಸಿಸುತ್ತವೆ. ತಮಗೆ ಅಪಾಯ ಎದುರಾಗಿದೆ ಎಂದು ಗೊತ್ತಾದ ಕೂಡಲೇ ತಮ್ಮೊಳಗೇ ಜಗಳವಾಡಿಕೊಳ್ಳುತ್ತವೆ.  ಇವುಗಳ ದೃಷ್ಟಿ, ಕೇಳಿಸಿಕೊಳ್ಳುವ ಮತ್ತು ವಾಸನೆ ಗ್ರಹಿಸುವ ಸಾಮರ್ಥ್ಯ ಅತ್ಯುತ್ತಮವಾಗಿದೆ. ಇವುಗಳ ತಲೆ ಮತ್ತು ದೇಹ ಸುಮಾರು 20 ಸೆಂ.ಮೀ ನಷ್ಟು ದೊಡ್ಡದಾಗಿರುತ್ತದೆ. ಆವಾಸ ಸ್ಥಾನಗಳ ನಾಶ ಮತ್ತು ಅರಣ್ಯ ನಾಶದಿಂದಾಗಿ ಇಂದು ಈ ವಿಶಿಷ್ಟ ಪ್ರಾಣಿ ಅಳಿವಿನ ಅಂಚಿನಲ್ಲಿದೆ. ಇವು ತಮ್ಮ ದಿನಿತ್ಯದ ಚಟುವಟಿಕೆಯಾದ ಹೆಂಡ ಹೀರುವುದಕ್ಕೆ ಮರಗಳೇ ಸಿಗದೆ ಚಡಪಸುತ್ತಿವೆ.

 

Sunday, March 10, 2013

ಕಣ್ಣಿಗೆ ಕಾಣದ ಪರಾಕ್ರಮಿ!

ಬಾಹ್ಯಾಕಾಶದಲ್ಲಿ ಬದುಕಬಲ್ಲ, ಎಂಥಹ  ವಿಷಮ ಪರಿಸ್ಥಿತಿಯಲ್ಲೂ ಜೀವಿಸಬಲ್ಲ ಜೀವಿ ಇದೆಯೇ? ಜಿರಳೆಗಳು ಅಣು ಸ್ಫೋಟವನ್ನೂ ಸಹಿಸಬಲ್ಲವು ಎಂಬ ಮಾತಿದೆ.  ಆದರೆ, ಅವುಗಳನ್ನೂ ಮೀರಿಸುವ ವಿಚಿತ್ರ ಪ್ರಾಣಿಯೊಂದರ ಬಗ್ಗೆ ನಿಮಗೆ ಗೊತ್ತೇ? ಹೌದು, ಹೀಗೊಂದು ಜೀವಿ ಇದೆ. ಇದು ಜಗತ್ತಿನ ಅತ್ಯಂತ ಸುರಕ್ಷಿತ ಜೀವಿ ಎಂದೇ ಪರಿಗಣಿಸಲ್ಪಟ್ಟಿದೆ. ಬಹುಶಃ ಯಾರೂ ಇದನ್ನು ನೋಡಿರಲಾರರು, ಕೈಯಲ್ಲಿ ಮುಟ್ಟಿರಲಾರರು ಅಥವಾ  ಇದರ ಪರಿಚಯವೇ ಇಲ್ಲದೇ ಇರಬಹುದು. ನಿಸರ್ಗದಲ್ಲಿ ಅತ್ಯಧಿಕ ವರ್ಷ ಬದುಕುವ ಏಕೈಕ ಪ್ರಾಣಿ ಎನ್ನುವ ಹೆಗ್ಗಳಿಕೆಯೂ ಇದಕ್ಕಿದೆ. ಈ ಜೀವಿಯೇ ಟಾಡ್ರಿಗೇಟ್ ಅಥವಾ ಜಲ ಕರಡಿ! 


ಮೈಕ್ರೋಸ್ಕೋಪ್ ನಿಂದಲೇ ನೋಡಬೇಕು!
 ಇದೊಂದು ಸೂಕ್ಷ್ಮ ಜೀವಿ. ಇದರ ಗಾತ್ರ ಕೇವಲ 0.3 ಮಿಲಿ ಮೀಟರ್ನಿಂದ 0.5 ಮಿಲಿ ಮೀಟರ್. ಮೈಕ್ರೊಸ್ಕೋಪ್ ಬಳಸಿಯೇ ಇದನ್ನು ನೋಡಬೇಕು. ಎಂತದ್ದೇ ಕಠಿಣ ಪರಿಸ್ಥಿತಿಯಲ್ಲೂ ಆನಂದದಿಂದ ಜೀವಿಸುವ ಪ್ರಾಣಿಯೊಂದು ಭೂಮಿಯ ಮೇಲೆ ಇದ್ದರೆ ಅದು ಜಲಕರಡಿ ಮಾತ್ರ. ಈ ವಿಚಿತ್ರ ಜೀವಿಯನ್ನು ಗೊಟ್ಜ್ ಎಂಬ ವಿಜ್ಞಾನಿ 1773ರಲ್ಲಿ ಕಂಡುಹಿಡಿದ. 



ಬಾಹ್ಯಾಕಾಶದಲ್ಲಿಯೂ ಬದುಕಬಲ್ಲದು!
ಈ ಸಣ್ಣ  ಆಕರ್ಷಕ ಪ್ರಾಣಿಗಳಲ್ಲಿ ಸುಮಾರು 900ಕ್ಕೂ ಹೆಚ್ಚು ಪ್ರಭೇದಗಳಿವೆ. ಇವು ಎತ್ತರದ ಪರ್ವತಗಳಿಂದ ಹಿಡಿದು ಆಳದ ಸಮುದ್ರಗಳಲ್ಲಿಯೂ ಕಂಡುಬರುತ್ತದೆ. ಅಷ್ಟೇಅಲ್ಲ ಅಂತರಿಕ್ಷಕ್ಕೆ ತೆಗೆದುಕೊಂಡುಹೋಗಿ ಬಿಟ್ಟುಬಂದರೂ ಹಾಯಾಗಿ ತೇಲಾಡಿಕೊಂಡಿರುತ್ತದೆ. ನೀರಿಲ್ಲಿ ಕುದಿಸಿದರೂ, ಹೆಪ್ಪುಗಟ್ಟಿಸಿದರೂ, ಒತ್ತಡದಿಂದ ಅದುಮಿದರೂ ಇವಕ್ಕೆ ಏನೂ ಆಗುವುದಿಲ್ಲ. ಏಕೆಂದರೆ ಇದರ ದೇಹ ರಚನೆಯೇ ವಿಶಿಷ್ಟ. ವಿಜ್ಞಾನಿಗಳಿಗೂ ಈ ಬಗ್ಗೆ ಹೆಚ್ಚೇನೂ ತಿಳಿದಿಲ್ಲ. ಸಿಲಿಂಡರ್ ಆಕಾರದ ದೇಹ ಹೊಂದಿರುವ ಇವುಗಳಿಗೆ ಮೋಟಾದ 8 ಕಾಲುಗಳಿವೆ. ಪ್ರತಿ ಕಾಲಿನ ಪಾದದಲ್ಲಿ ಚಿಕ್ಕದಾದ 4-8 ಉಗುರುಗಳಿವೆ. ಹರಿತವಾದ ವಸ್ತುವಿನಂತಿರುವ ಬಾಯಿಯನ್ನು ಹೊಂದಿದೆ. ಚಿಕ್ಕದಾಗಿದ್ದರೂ ನೋಡಲು ಕರಡಿಯಂತೆ ಕಾಣುವುದರಿಂದ ಜಲಕರಡಿ ಎಂದು ಅನ್ವರ್ಥಕನಾಮ ಪಡೆದುಕೊಂಡಿದೆ.

ಅಣು ಸ್ಫೋಟ ಎದುರಿಸಬಲ್ಲದು
!
ಈ ಜಲಕರಡಿ 357 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವನ್ನೂ ತಡೆದುಕೊಳ್ಳಬಲ್ಲದು. ಅದೇರೀತಿ - 457 ಡಿಗ್ರಿಗಿಂತ ಕಡಿಮೆ ತಾಪಮಾನವನ್ನೂ ಸಹಿಸಬಲ್ಲದು. ನೀರಿಲ್ಲದೇ ದಶಕಗಳ ಕಾಲ ಬದುಕಬಲ್ಲದು. ಏನಿಲ್ಲವೆಂದರೂ 200ಕ್ಕೂ ಹೆಚ್ಚುಕಾಲ ಇವು ಬದುಕುತ್ತವೆ. ಮನುಷ್ಯಸೇರಿದಂತೆ ಎಲ್ಲಾ ಪ್ರಾಣಿಗಳು 10-20 ರಷ್ಟು ಪ್ರಮಾಣದ ವಿಕಿರಣದಲ್ಲಿ ಸರ್ವನಾಶವಾಗುತ್ತವೆ. ಆದರೆ, ಟಾಡ್ರಿಗೇಟ್ ಮಾತ್ರ 5,700 ಪ್ರಮಾಣದ ವಿಕಿರಣವನ್ನೂ ಸಹಿಸುವ ಸಾಮಥ್ರ್ಯ ಹೊಂದಿದೆ. ಅಂದರೆ ಅಣುಸ್ಫೋಟವನ್ನು ಸಹ ಇವು ಎದುರಿಸಬಲ್ಲವು.

ವಿಶಿಷ್ಟ ಜೀವನ ಚಕ್ರ

ಇವು ಕೇವಲ ಸಸ್ಯ ಜೀವಕೋಶ, ಸಮುದ್ರ ಪಾಚಿ ಮತ್ತು ಸೂಕ್ಷ ಜೀವಿಗಳನ್ನು ತಿನ್ನುವದರಿಂದ ಅವುಗಳಿಗೆ ಈ ರೀತಿಯ ಬಲ ಬಂದಿದೆ ಎಂದು ಹೇಳಲಾಗಿದೆ. ಕೆಲವು ಜಲ ಕರಡಿಗಳು ಪ್ರತಿಜೀವಾಣು (ಆಂಟಿಬಯಾಟಿಕ್) ರೂಪದಲ್ಲಿ ಅನೇಕ ವರ್ಷಗಳಕಾಲ ಇರಬಲ್ಲದು. ಇವು  ಬೆಳವಣಿಗೆ  ಹೊಂದಿದ ಪ್ರಜಾತಿ ಆಧರಿಸಿ ವಿವಿಧ ಬಣ್ಣ ಮತ್ತು ಆಕಾದಲ್ಲಿ ಕಂಡುಬರುತ್ತವೆ. ಬೂದು, ನೀಲಿ ಹಳದಿ-ಕಂದು, ಕೆಂಪು ಬಣ್ಣಗಳನ್ನು ಇವು ಹೊಂದಿರುತ್ತವೆ. ಗಂಡಿಗಿಂತಲೂ ಹೆಣ್ಣು ಹೆಚ್ಚಿನ ಸಂಖ್ಯೆಯಲ್ಲಿರುತ್ತದೆ. ಜತೆಗೆ ಆಕಾರದಲ್ಲಿಯೂ ದೊಡ್ಡದು. ಅದು ತನ್ನ ಮೊಟ್ಟೆಗಳನ್ನು ಪೊರೆಯಲ್ಲಿ ಇರಿಸುತ್ತದೆ. ಈ ಮೊಟ್ಟೆಗಳು ಅನೇಕಬಾರಿ ರೂಪಾಂತರಗೊಂಡ ಬಳಿಕ ಪ್ರೌಢಾವಸ್ಥೆಗೆ ಬರುತ್ತದೆ. ಇದರ ಜೀವಕೋಶ ಇತರ ಯಾವುದೇ ಪ್ರಾಣಿಗಳಿಗೂ ಹೊಂದಿಕೆಯಾಗುವುದಿಲ್ಲ.

Sunday, March 3, 2013

ಕತ್ತಲ ಜಗತ್ತಿನ ಕುಬ್ಜ ಆಕ್ಟೊಪಸ್

ಉದ್ದನೆಯ ಎಂಟು ಕಾಲುಗಳುಳ್ಳ ಆಕ್ಟೊಪಸ್ ನಮಗೆಲ್ಲಾ ಗೊತ್ತು. ಆದರೆ, ಅದರಲ್ಲಿ ಕುಬ್ಜವೆನಿಸಿದ ರೆಕ್ಕೆಗಳ ಮೂಲಕ ನೀರಿನಲ್ಲಿ ಈಜುವ ಆಕ್ಟೊಪಸ್ ಒಂದಿದೆ. ಅದೇ ಡಂಬೊ ಆಕ್ಟೊಪಸ್. ಆದರೆ, ಇದು ಇರುವುದು ಯಾರೂ ಹೋಗಲಾಗದ ಕತ್ತಲ ಜಗತ್ತಿನಲ್ಲಿ. ತಲೆಯ ಮೇಲ್ಭಾಗದಲ್ಲಿ ಕಿವಿಯಂತಿರುವ ರೆಕ್ಕೆಗಳು ಮತ್ತು ಕಾರ್ಟೂನ್ ಗಳಲ್ಲಿನ ಕಾಲ್ಪನಿಕ ಹಾರುವ ಆನೆಯ ಆಕೃತಿಯಿಂದಾಗಿ ಇವುಗಳಿಗೆ ಡಂಬೊ ಆಕ್ಟೊಪಸ್ ಎನ್ನುವ ಹೆಸರು ಬಂದಿದೆ. 
 
 ಬಹುತೇಕ ಸಮುದ್ರದ ಆಳದಲ್ಲಿ ವಾಸಿಸುವುದರಿಂದ ಇದರ ಪರಿಚಯ ಯಾರಿಗೂ ಅಷ್ಟಾಗಿ ತಿಳಿದಿಲ್ಲ. ಸಮುದ್ರದ ಸುಮಾರು 400 ಮೀಟರ್ನಿಂದ 7 ಕಿ.ಮೀ. ಆಳದಲ್ಲಿ ಇವು ಕಂಡುಬರುತ್ತದೆ. ಸಮುದ್ರ ತಳದಿಂದ ಸ್ವಲ್ಪ ಮೇಲ್ಭಾದಲ್ಲಿ ಇವು ಹೆಚ್ಚಾಗಿರುತ್ತವೆ. ಡಂಬೊ ಆಕ್ಟೊಪಸ್ನ್ನು ಪ್ರತ್ಯಕ್ಷವಾಗಿ ನೋಡ ಬಯಸುವವರು ಸಮುದ್ರದ ಕನಿಷ್ಠ 6.600 ಅಡಿಯಷ್ಟಾದರೂ ಆಳಕ್ಕೆ ಇಳಿಯುವ ಸಾಹಸಮಾಡಬೇಕು. ಏಕೆಂದರೆ ಈ ಆಕ್ಟೊಪಸ್ ಎಂದಿಗೂ ಮೇಲೆ ಬರುವುದಿಲ್ಲ. ಇಷ್ಟೊಂದು ಗುಪ್ತವಾಗಿ ವಾಸಿಸುವ ಇವು ಸೂರ್ಯನ ಬೆಳಕನ್ನೇ ನೋಡುವುದಿಲ್ಲ!


ಕಿವಿಯಿಂದ ಈಜಾಡುತ್ತೆ:
ಇದರ ವಿಶಿಷ್ಟತೆಯೆಂದರೆ ತಲೆಯ ಮೇಲಿರುವ ಕಿವಿಯಂತಿರುವ ಎರಡು ರೆಕ್ಕೆ. ಹಕ್ಕಿಯಂತೆ ಈ ರೆಕ್ಕೆಗಳನ್ನು ಬಡಿಯುತ್ತಾ ನೀರಿನಲ್ಲಿ ಸರಾಗವಾಗಿ ಈಜಾಡುವುದನ್ನು ವೀಕ್ಷಿಸುವದೇ ಒಂದು ಸುಂದರ ಅನುಭವ. ಇದರ ತಲೆ ದೇಹಕ್ಕಿಂಲೂ ದೊಡ್ಡದು. ಜತೆಗೆ ಒಂದಕ್ಕೊಂದು ಹೊಂದಿಕೊಂಡಿರುವ ಅಷ್ಟಪಾದಗಳನ್ನು ಸಂಕುಚನ-ವಿಕಸನಗೊಳಿಸುತ್ತಾ ಅಥವಾ ಮೂಗಿನ ಮೂಲಕ ನೀರು ಹೊರಬಿಟ್ಟು ಮುಂದಕ್ಕೆ ಸಾಗುತ್ತವೆ. ಡಂಬೊ ಆಕ್ಟೊಪಸ್ ಗಾತ್ರದಲ್ಲಿ 8 ಇಂಚಿನಷ್ಟು ದೊಡ್ಡದಿರುತ್ತದೆ. ಇವು ಮೃದುವಾದ ದೇಹ ಹೊಂದಿರುವುದರಿಂದ ಆಳ ಸಮುದ್ರದಲ್ಲಿ ವಾಸಿಸಲು ಸಾಧ್ಯವಾಗಿದೆ. ಡಂಬೊ ಆಕ್ಟೊಪಸ್ ನಲ್ಲಿ 37 ವೈವಿಧ್ಯಮಯ ಪ್ರಜಾತಿಗಳಿದ್ದು, ಆಕಾರ  ಮತ್ತು ಬಣ್ಣದಲ್ಲಿ ಒಂದಕ್ಕೊಂದು ವಿಭಿನ್ನ. ಅಷ್ಟೇಅಲ್ಲ ಗಂಡು ಮತ್ತು ಹೆಣ್ಣಿನ ಆಕಾರದಲ್ಲಿ ಸಂಪೂರ್ಣ ವ್ಯತ್ಯಾಸವಿದೆ.

 
ಇಡಿಯಾಗಿಯೇ ನುಂಗುತ್ತದೆ:
ಜಗತ್ತಿನ ಎಲ್ಲಾ ಏಳು ಮಹಾಸಾಗರಗಳಲ್ಲಿಯೂ ಇವು ಕಂಡುಬರುತ್ತವೆ. ಸಂಪೂರ್ಣ ಅಂಧಕಾರದಲ್ಲಿ ಬದುಕು ನಡೆಯುವುದರಿಂದ ಇದರ ಕಣ್ಣಿನ ದೃಷ್ಟಿ ಮಂದವಾಗಿರುತ್ತದೆ. ಇಲ್ಲಿ ಆಹಾರ ದೊರಕುವುದೇ ಅಪರೂಪವಾಗಿರುವುದರಿಂದ ಸಿಕ್ಕಿದ ಆಹಾರವನ್ನು ಬಹುಬೇಗನೆ ತಿನ್ನಬೇಕು. ಆದರೆ, ಆಹಾರ ಜೆಗೆದು ತಿನ್ನಲು ಈ ಆಕ್ಟೊಪಸ್ ಬಾಯಿಯಲ್ಲಿ ಹಲ್ಲುಗಳೇ ಇಲ್ಲ. ಹೀಗಾಗಿ ಇವು ಬೇಟೆಯನ್ನು ಇಡಿಯಾಗಿಯೇ ನುಂಗುತ್ತದೆ. ಇದರ ಅಷ್ಟ ಪಾದಗಳು ಪುಟ್ಟದಾಗಿದ್ದು, ಒಂದಕ್ಕೊಂದು ಜೋಡಣೆಯಾಗಿರುತ್ತದೆ. ಇದು ಈಜಾಡಲು ಮತ್ತು ಬೇಟೆಯನ್ನು ಹಿಡಿದುಕೊಳ್ಳಲು ನೆರವಾಗುತ್ತದೆ. ಡಂಬೋ ಆಕ್ಟೊಪಸ್ ಕುಬ್ಜವಾಗಿದ್ದರೂ ಉತ್ತಮ ಈಜುಗಾರ. 
ಇವು ಪಾರದರ್ಶಕವಾದ ತಮ್ಮ ಮೈಯನ್ನು ಬೇಕೆಂದಾಗ ತೊಳೆದುಕೊಳ್ಳತ್ತವೆ. ಇದರ ಸಂತಾನ ಕ್ರಮವೇ ವಿಚಿತ್ರ. ವರ್ಷದ ಎಲ್ಲಾ ಋತುವಿನಲ್ಲೂ ಮೊಟ್ಟೆ ಇಡುತ್ತಲೇ ಇರುತ್ತದೆ. ಗಂಡು ಆಕ್ಟೊಪಸ್ ವೀರ್ಯದ ಚೀಲವನ್ನು ಹೆಣ್ಣಿಗೆ ರವಾನಿಸುತ್ತದೆ. ಹೆಣ್ಣು ಅವುಗಳನ್ನು ಫಲಗೊಳಿಸಿ ಒಂದೊಂದೆ ಮೊಟ್ಟೆಗಳನ್ನು ಸಮುದ್ರದ ತಳದಲ್ಲಿ ಇಟ್ಟು ಬರುತ್ತದೆ.