ಜೀವನಯಾನ

Monday, November 26, 2012

ಮುಳ್ಳಂದಿಯ ಬಾಣ ಪ್ರಯೋಗ

ಇದರ ಹೆಸರೇ ಸೂಚಿಸುಂತೆ ಮೈಯಲ್ಲಾ ಮುಳ್ಳಿನದ್ದೇ ಹೊದಿಕೆ. ಮುಳ್ಳಿನ ಗರಿಗಳೇ ಇದರ ಪ್ರಮುಖ ಆಯುಧ. ಮುಳ್ಳುಹಂದಿ ಮೈ ಮೇಲೆ ಸುಮಾರು 30 ಸಾವಿರ ಮುಳ್ಳಿನ ಗರಿಗಳನ್ನು ಹೊಂದಿರುತ್ತದೆ.  ಮುಳ್ಳಿನ ಗರಿಗಳನ್ನು ಆಡು ಭಾಷೆಯಲ್ಲಿ ಅಂಬು ಎಂದು ಕರೆಯಲಾಗುತ್ತದೆ. ಇದು ಹಂದಿಯ ಸಂತತಿಗೆ ಸೇರಿದ ವಿಶಿಷ್ಟ ಪ್ರಾಣಿ. ತನ್ನ ತಂಟೆಗೆ ಬರುವವರಿಗೆ ಮುಳ್ಳಿನ ಅಂಬಿನ ಮೂಲಕವೇ ಉತ್ತರ ಕೊಡುತ್ತದೆ. ಹೀಗಾಗಿ ಯಾವ ಪ್ರಾಣಿಯೂ ಇದರ ಹತ್ತಿರವೂ ಸುಳಿಯುವುದಿಲ್ಲ. ಆದರೆ ಇದರ ಅಂಬು ಅಥವಾ ಬಾಣಗಳು ವಿಷಕಾರಿಯಲ್ಲ. 



ನಿಶಾಚರಿ: ಕಾಡಿನಲ್ಲಿ ಇವು ಓಡುವಾಗ ಅಲ್ಲಲ್ಲಿ ಮುಳ್ಳಂದಿಯ ಅಂಬುಗಳು ಬಿದ್ದಿರುತ್ತವೆ. ರಾತ್ರಿಯ ವೇಳೆ ಇವು ಹೆಚ್ಚು ಸಕ್ರಿಯವಾಗಿರುತ್ತವೆ. ಹಗಲಿನ ವೇಳೆ ಮಣ್ಣಿನ ಬಿಲದೊಳಗೆ ನಿದ್ರಿಸಿರುತ್ತವೆ. ಆಹಾರ ಹುಡುಕುವ ಸಲುವಾಗಿ ಮಾತ್ರ ಹೊರಗಡೆ ಬರುತ್ತದೆ. ಹೀಗಾಗಿ ಇವು ಕಾಣಸಿಗುವುದು ಅಪರೂಪ.
 
ವೈರಿಗಳ ಮೇಲೆ ಬಾಣ ಪ್ರಯೋಗ:ತನಗೆ ಅಪಾಯ ಎದುರಾಗಿದೆ ಎಂದು ಗೊತ್ತಾದಾಗ ಮುಳ್ಳಿನ ಗರಿಗಳನ್ನು ಮೇಲಕ್ಕೆ ಎತ್ತಿ ಅಂಬುಗಳನ್ನು ಬಿಡುವ ಮುನ್ಸೂಚನೆ ರವಾನಿಸುತ್ತದೆ. ಇದರ ಹೊರತಾಗಿಯೂ ಕೆಣಕಲು ಬರುವವರಿಗೆ ಒಂದರ ಹಿಂದೆ ಒಂದು ಬಾಣ ಬಿಟ್ಟು ಕುಳುಹಿಸುತ್ತಿದೆ.  ಸಾಮಾನ್ಯವಾಗಿ ಇದರ ತಂಟೆಗೆ ಬರುವ ನಾಯಿಗಳು ಮುಳ್ಳಂದಿಯ ಅಂಬಿನಿಂದ ಹೊಡೆತ ತಿನ್ನುತ್ತವೆ. ಒಮ್ಮೆ ಅಂಬಿನಿಂದ ಚುಚ್ಚಿಸಿಕೊಂಡ ಪ್ರಾಣಿ ಮತ್ತೆ ಇದರ ತಂಟೆಗೆ ಬರುವುದಿಲ್ಲ. ಮುಳ್ಳಂದಿಯ ಮುಳ್ಳು ಚುಚ್ಚಿದರೆ ಕೀಳುವುದು ಅಷ್ಟು ಸುಲಭದಲ್ಲಿ ಸಾಧ್ಯವಿಲ್ಲ. ಚುಚ್ಚಿದ ಮುಳ್ಳು ಮತ್ತಷ್ಟು ದೇಹದ ಆಳಕ್ಕೆ ಹೋಗುತ್ತಲೇ ಇರುತ್ತದೆ. ಹುಲಿ, ಸಿಂಹ ಮುಂತಾದ ಬಲಶಾಲಿ ಪ್ರಾಣಿಗಳೂ ಇದರಿಂದ ಅಂಬು ಚುಚ್ಚಿಸಿಕೊಂಡು ಬಂದ ದಾರಿಗೆ ಸುಂಕವಿಲ್ಲ ಎಂದು ಸುಮ್ಮನಾಗುತ್ತವೆ. 

ಮುಳ್ಳು ಖಾಲಿಯಾಗುವುದೇ ಇಲ್ಲ.
ಜಗತ್ತಿನಾದ್ಯಂತ ಮುಳ್ಳಂದಿಯ ಸುಮಾರು 29 ಪ್ರಭೇದಗಳಿವೆ. ಭಾರತದಲ್ಲಿಯೂ ಇದರ ಸಂತತಿಯನ್ನು ಕಾಣಬಹುದು. ಮುಳ್ಳಂದಿ ಸುಮಾರು 25ರಿಂದ 36 ಇಂಚು ದೊಡ್ಡದಾಗಿರುತ್ತದೆ. 8ರಿಂದ 10 ಇಂಚು ದೊಡ್ಡ ಬಾಲ ಹೊಂದಿರುತ್ತದೆ. ಇತರ ಪ್ರಾಣಿಗಳಿಂದ ಅಪಾಯ  ಎದುರಾದಾಗ ಇವು ಮೈಯನ್ನು ಕುಲುಕಿಸಿ ಅಂಬನ್ನು ಹೊರಹಾಕುತ್ತವೆ. ಆದರೆ ತಾನಾಗಿಯೇ ಯಾರ ಮೇಲೂ ಬಾಣ ಪ್ರಯೋಗಿಸಲು ಹೋಗುವುದಿಲ್ಲ. ದಾಳಿಯಿಂದ ಉದುರಿದ ಅಂಬಿನ ಜಾಗದಲ್ಲಿ ಮತ್ತೊಂದು ಅಂಬು ಹೊಟ್ಟಿಕೊಳ್ಳುತ್ತದೆ. ಹೀಗಾಗಿ ಇದರ ಮೈ ಮೇಲಿನ ಮುಳ್ಳು ಖಾಲಿಯಾಗುವುದೇ ಇಲ್ಲ. ಮುಳ್ಳು ಒಳಗಡೆ ಪೊಳ್ಳಾಗಿದ್ದು, ಗಾಳಿ ತುಂಬಿರುತ್ತದೆ. ತಿದಿಯ ಭಾಗದಲ್ಲಿ ಅತ್ಯಂತ ಹರಿತವಾಗಿರುತ್ತದೆ. ಒಂದು ಅಡಿಯಷ್ಟು ಉದ್ದದ ಮುಳ್ಳಿನ ಅಂಬನ್ನು ಹೊಂದಿರುತ್ತದೆ. ಮುಳ್ಳಿನ ಅಂಬು ಪೊಳ್ಳಾಗಿದ್ದರಿಂದ ನೀರಿನ ಮೇಲೂ ಸಹ ಸಲೀಸಾಗಿ ಚಲಿಸಬಲ್ಲದು.

ಹಂದಿಯಂತೆ ಗೆಣಸು ಕೀಳುತ್ತೆ!

ಇವು ದೊಡ್ಡ ಹಂದಿಗಳಂತೆ ಎಲೆ, ಕಾಂಡ, ತೊಗಟೆ, ಗಡ್ಡೆ, ಗೆಣಸುಗಳನ್ನು ತಿಂದು ಬದುಕುವ ಸಸ್ಯಾಹಾರಿಗಳು. ಮುಳ್ಳಂದಿಗೆ ಹುಟ್ಟುವಾಗಲೇ ಮುಳ್ಳಿನ ಗರಿಗಳು ಇರುವುದಿಲ್ಲ. ಹುಟ್ಟಿದ ಒಂದೆರಡು ದಿನಗಳ ಬಳಿಕ ಮೆತ್ತಗಿನ ಮುಳ್ಳುಗಳು ಹುಟ್ಟಿಕೊಂಡು ಕ್ರಮೇಣ ಗಟ್ಟಿಯಾಗುತ್ತದೆ. ಕಾಲಿನಿಂದ ತಾನಿರುವ ಜಾಗವನ್ನು ಕೆದಕುವುದು ಇರದ ಹವ್ಯಾಸ. ಇದು ಕೆದಕಿದ ಜಾಗದಲ್ಲಿ ಮುಳ್ಳುಗಳನ್ನು ಉದುರಿಸುತ್ತದೆ. ಮುಳ್ಳಂದಿ ಸುಮಾರು 18 ವರ್ಷಗಳ ಜೀವಿತಾವಧಿ ಹೊಂದಿದೆ. ಮುಳ್ಳುಗಳು ಬಿಳಿ ಮತ್ತು ಕಪ್ಪು ಬಣ್ಣದಲ್ಲಿ ಕಂಡುಬರುತ್ತದೆ. ಕೊಂಬಿನ ಕೊಬ್ಬಿನಿಂದ ಇವು ಮಾಡಲ್ಲಟ್ಟಿದೆ.

ಮಳ್ಳಿನ ಬಳಕೆಯೂ ಉಂಟು

ಹಿಂದಿನ ಕಾಲದಲ್ಲಿ ಮುಳ್ಳಂದಿಯ ಅಂಬುಗಳನ್ನು ಬಟ್ಟೆಗಳ ಅಲಂಕಾರ, ಬಾಚಣಿಕೆ, ಮತ್ತು ತಲೆಯ ಅಲಂಕಾರಕ್ಕಾಗಿ ಬಳಸುತ್ತಿದ್ದರು. ಈಗಲೂ ಇದನ್ನ ಸಂಗ್ರಹಿಸುವ ಹವ್ಯಾಸವಿದೆ.

Tuesday, November 13, 2012

ಹೆಲಿಕಾಪ್ಟರ್ ಚಿಟ್ಟೆ

ಡ್ರ್ಯಾಗನ್ ಫ್ಲೈ ಆಕಾಶದಲ್ಲಿ ಹಾರುತ್ತಿದ್ದರೆ ಹೆಲಿಕಾಪ್ಟರನ್ನೇ ನೋಡಿದ ಅನುಭವ. ಗಾಳಿಯಲ್ಲಿ ನಿಂತು ಸರ್ಕಸ್ ಮಾಡುವ ಇದರ ದೇಹ ರಚನೆ, ತಲೆ, ರೆಕ್ಕೆ, ಬಾಲ ಹೀಗೆ ಎಲ್ಲವೂ ಹೆಲಿಕಾಪ್ಟರನ್ನೇ ಹೋಲುತ್ತದೆ. ಇಂಜಿನಿಯರ್ಗಳು ಏರೋಪ್ಲೇನ್, ಹೆಲಿಕಾಪ್ಟರ್ ಮುಂತಾದ ಲೋಹದ ಹಕ್ಕಿಗಳನ್ನು ಕಂಡುಹಿಡಿಯಲೂ ಡ್ರ್ಯಾಗನ್ ಫ್ಲೈ ಪ್ರೇರಣೆ ಎನ್ನುವ ಮಾತಿದೆ. ಹೀಗಾಗಿ ಇದನ್ನು ಏರೋಪ್ಲೇನ್ ಚಿಟ್ಟೆ ಎಂತಲೂ ಕರೆಯುತ್ತಾರೆ.


ಡ್ರ್ಯಾಗನ್ ಫ್ಲೈ ರೆಕ್ಕೆ ಇರುವ ಮೋದಲ ಕೀಟ ಎಂದು ತಿಳಿಯಲಾಗಿದ್ದು, ಸುಮಾರು 300 ದಶಲಕ್ಷ ವರ್ಷಗಳ ಹಿಂದೆಯೇ ಇವುಗಳ ಇರುವಿಕೆ ಗುರುತಿಸಲಾಗಿದೆ. ಆಮ್ಲಜನಕದ ಪ್ರಮಾಣ ಹೆಚ್ಚಾಗಿದ್ದ ಶಿಲಾಯುಗದ ಕಾಲದಲ್ಲಿ ದೊಡ್ಡ ಗಾತ್ರದ ಡ್ರ್ಯಾಗನ್ ಫ್ಲೈಗಳು ಇದ್ದವು ಎಂದು ವಿಜ್ಞಾನಿಗಳ ಊಹೆ. ಡ್ರ್ಯಾಗನ್ ಫ್ಲೈಗಳಲ್ಲಿ ಸುಮಾರು 5 ಸಾವಿರ ಪ್ರಭೇದಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 5  ನೂರಕ್ಕೂ ಹೆಚ್ಚು ಪ್ರಕಾರಗಳು  ಭಾರತದಲ್ಲಿವೆ. ಇವುಗಳ ಜೀವಿತಾವಧಿ ತುಂಬಾ ಕಡಿಮೆ. ಒಂದು ತಿಂಗಳು ಅಥವಾ ಅದಕ್ಕಿಂತಲೂ ಕಡಿಮೆ ಜೀವಿತಾವಧಿ ಹೊಂದಿರುತ್ತದೆ. ಕೆಲವು ಜಾತಿಯ ಡ್ರ್ಯಾಗನ್ ಫ್ಲೈ ಅರ್ಧ ವರ್ಷಗಳ ತನಕ ಬದುಕಬಲ್ಲದು. ಇವು ಕೂರುವುದಕ್ಕಿಂತ ಬಾನಿನಲ್ಲಿರುವುದೇ ಹೆಚ್ಚು. ವಿಮಾನದಂತೆ ತನ್ನ ರೆಕ್ಕೆಯನ್ನು ಅಗಲವಾಗಿಟ್ಟುಕೊಂಡಿರುವುದರಿಂದ ಇದಕ್ಕೆ ಏರೋಪ್ಲೇನ್ ಚಿಟ್ಟೆಯೆಂಬ ಹೆಸರು ಬಂದಿರಬೇಕು.

ಗಾಳಿಯಲ್ಲಿ ನಿಂತು ಬೇಟೆ:

ಡ್ರ್ಯಾಗನ್ ಫ್ಲೈ ಹಾರುವುದರಲ್ಲಿ ವಿಶೇಷ ಪರಿಣತಿ ಪಡೆದಿವೆ. ಡ್ರ್ಯಾಗನ್ ಫ್ಲೈಗೆ ತೆಳ್ಳಗಿನ ನಾಲ್ಕು ರೆಕ್ಕೆಗಳಿರುತ್ತವೆ. ಕೀಟಗಳಲ್ಲಿಯೇ ಅತ್ಯಂತ ವೇಗವಾಗಿ ಇದು ಹಾರಬಲ್ಲದು. ಹಾರುವಾಗ ಗಂಟೆಗೆ 60 ಮೈಲಿ ವೇಗವನ್ನು ಡ್ರ್ಯಾಗನ್ ಫ್ಲೈ ತಲುಪುತ್ತದೆ.  ಗಾಳಿಯಲ್ಲಿರುವಾಗ ಮೇಲೆ, ಕೆಳಗೆ, ಹಿಂದೆ, ಮುಂದೆ, ಉಲ್ಟಾ ಪಲ್ಟಾ ಹೇಗೆ ಬೇಕಾದರೂ ದಿಕ್ಕನ್ನು ಬದಲಿಸುವ ಸಾಮರ್ಥ್ಯ ಡ್ರ್ಯಾಗನ್ ಫ್ಲೈಗಿದೆ. ಗಾಳಿಯಲ್ಲೇ ಎಷ್ಟು ಹೊತ್ತು ಬೇಕಾದರೂ ನಿಂತು ಕೊಳ್ಳಬಲ್ಲದು. ಭೂಮಿಯ ಮೇಲೆ ಇಳಿಯದೇ  ಒಂದು ದಿನವನ್ನು ಗಾಳಿಯಲ್ಲಿಯೇ ಕಳೆಯಬಲ್ಲದು. ಇವುಗಳಿರುವ ಆರು ಕಾಲುಗಳುದ್ದಕ್ಕೂ ಮುಳ್ಳುಗಳಂತಿರುವ ರೋಮಗಳಿವೆ. ಇದರಿಂದಾಗಿ ಇವು ಹಾರುವಾಗಲೇ ಕೀಟಗಳನ್ನು ಬಿಗಿಯಾಗಿ ಹಿಡಿದು ತಿನ್ನುತ್ತವೆ. ಹೀಗಾಗಿ ಇವಕ್ಕೆ ನೆಲಕ್ಕೆ ಬರುವ ಪ್ರಮೇಯವೇ ಬರುವುದಿಲ್ಲ.

ನೀರಿರುವ ಜಾಗದಲ್ಲಿ ವಾಸ:
ಇವು ಹೆಚ್ಚಾಗಿ ಕೆರೆ, ನದಿ, ಹಳ್ಳ ಕೊಳ್ಳ ಮುಂತಾದ ನೀರಿರುವ ಪ್ರದೇಶದಲ್ಲಿಯೇ ಹೆಚ್ಚಾಗಿ ಕಂಡುಬರುತ್ತದೆ. ಆಹಾರವನ್ನು ಹುಡುಕುವ ಸಲುವಾಗಿ ಮಾತ್ರ ಇತರ ಪ್ರದೇಶಗಳಿಗೆ ತೆರಳುತ್ತದೆ. ನಂತರ ನೀರಿರುವ ಪ್ರದೇಶಕ್ಕೆ ವಾಪಸ್ ಸಂತಾನೋತ್ಪತ್ತಿ ಮತ್ತು ಮೊಟ್ಟೆಯಿಡುತ್ತವೆ. ನೀರಿನಲ್ಲಿಯೇ ಇವುಗಳ ಜೀವನ ಆರಂಭವಾಗುತ್ತದೆ. ಲಾರ್ವಾ ಸ್ಥಿತಿಯಲ್ಲಿ ಎರಡು ವರ್ಷ ಜೀವನ ಸವೆಸಿದ ಬಳಿಕ ಮೊಟ್ಟೆಯೊಡೆದು ಕೀಟದ ರೂಪ ಪಡೆಯುತ್ತದೆ. ನಂತರ ಕೆಲವು ಗಂಟೆಯ ಬಳಿಕ ರೆಕ್ಕೆಗಳು ಬಲಿತು ಡ್ರ್ಯಾಗನ್ ಫ್ಲೈನ ಆಕಾರ ತಾಳುತ್ತದೆ. ಮುಂಗಾರು ಮುಗಿದು ಚಳಿಗಾಲ ಆರಂಭವಾಗುತ್ತಿದ್ದಂತೆ ಡ್ರ್ಯಾಗನ್ ಫ್ಲೈ ನೋಡಲು ಸಿಗುತ್ತದೆ. 

ತಲೆಗಿಂತಲೂ ದೊಡ್ಡ ಕಣ್ಣು:
ಏರೋಪ್ಲೇನ್ ಚಿಟ್ಟೆಯ ತಲೆಯ ಬುಹುತೇಕ ಭಾಗವನ್ನು ಎರಡು ದೊಡ್ಡ ಕಣ್ಣುಗಳು ಆಕ್ರಮಿಸಿವೆ. ಇವನ್ನು ಸಂಯುಕ್ತ ಕಣ್ಣು(ಕಂಪೌಂಡ್ ಐಸ್)ಗಳೆನ್ನುತ್ತಾರೆ. ಇದರ ಕಣ್ಣಿನಲ್ಲಿ 30 ಸಾವಿರ ಲೆನ್ಸ್ ಗಳು ಇರುತ್ತವೆ. ಕಣ್ಣಿನ ಗುಡ್ಡೆ ತೆಲೆಯಿಂದ ಹೊರಬಂದಿರುವುದರಿಂದ 360 ಡಿಗ್ರಿ ಕೋನದಲ್ಲಿ ತನ್ನ ಸುತ್ತಲೂ ನೋಡಬಲ್ಲದು. ಇದರ ಶೇ. 80 ರಷ್ಟು ಮಿದುಳು ಕಣ್ಣಿನ ದೃಷ್ಟಿಯನ್ನು ಗ್ರಹಿಸುವ ಸಲುವಾಗಿಯೇ ಮೀಸಲು. ಹಾಗಾಗಿ ಇವುಗಳನ್ನು ಹಿಡಿಯುವುದು ತುಂಬಾ ಕಷ್ಟ. ಅಲ್ಲದೇ ಜೇಡ, ಹಾವು ಕಪ್ಪೆ, ಹಕ್ಕಿ ಮುಂತಾದ ವೈರಿಗಳಿಂದಲೂ ಸುಲಭವಾಗಿ ಪಾರಾಗಬಲ್ಲದು. ಆದರೆ ಜೇಡನ ಬಲೆಯಲ್ಲಿ ಸಿಕ್ಕಿಬಿದ್ದು ಅವುಗಳಿಗೆ ಆಹಾರವಾಗುತ್ತವೆ.

Sunday, November 4, 2012

ಹಾರುವ ಓತಿ ಕಂಡಿದ್ದೀರಾ?

 ವಿಶ್ವದಲ್ಲೇ ಅಪರೂಪದ ಸಂತತಿ ಎನಿಸಿಕೊಂಡಿರುವ ಹಾರುವ ಓತಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಂಡು ಅಚ್ಚರಿ ಮೂಡಿಸುತ್ತದೆ. ಸುತ್ತಮುತ್ತಲೂ ಕಂಡುಬರುವ ಇತರ ಓತಿಗಳಷ್ಟೇ ಗಾತ್ರವನ್ನು ಹಾರುವ ಓತಿ ಹೊಂದಿರುತ್ತದೆ. ಹಾರಿದಾಗ ಮಾತ್ರ ಹಾರುವ ಓತಿ ನಮ್ಮ ಗಮನಕ್ಕೆ ಬರುತ್ತದೆ. 


 ಓತಿ ಹಾರುವುದು ಹೇಗೆ?
ಓತಿಗೆ ಹಾರಲು ಹಕ್ಕಿಯಂತೆ ಅಗಲವಾದ ರೆಕ್ಕೆಗಳಿಲ್ಲ. ಹಾರಾಟದ ಆರಂಭದಲ್ಲಿ ಜಿಗಿಯುವಾಗ ಸಿಗುವ ನೂಕು ಬಲದಿಂದ ಇವು ಹಾರುತ್ತದೆ. ಇದರ ಮುಗಾಲು ಮತ್ತು ಹಿಂಗಾಲುಗಳ ಮಧ್ಯದ ತೆಳು ಚರ್ಮ ಒಂದಷ್ಟು ವಿಸ್ತರಿಸಿಕೊಂಡು ರೆಕ್ಕೆಯಂತೆ ಚಾಚಿಕೊಂಡಿರುತ್ತದೆ. ಇವು ಹಾರಾಟಕ್ಕೆ ಸಹಕಾರಿಯಾಗುತ್ತವೆ. ಇದು ಜಾರು ರೆಕ್ಕೆ ಎಂದು ಕರೆಯಲ್ಪಡುತ್ತದೆ. ಹಾವು  ಗಿಡುಗ  ಮುಂತಾದ ವೈರಿಯಿಂದ ತನಗೆ ಅಪಾಯ ಎದುರಾದಾಗ ರೆಕ್ಕೆ ಅರಳಿಸಿ ಸುರಕ್ಷಿತ ಜಾಗಕ್ಕೆ ಹಾರಿಹೋಗುತ್ತದೆ. ಹಾರುವ ಓತಿ ರೆಕ್ಕೆ ಅರಳಿಸಿ ಸುಮಾರು 60 ಮೀ. ತನಕ ಹಾರಬಲ್ಲದು.

ಹಾರುವ ಓತಿಯ ಲಕ್ಷಣಗಳು
  • ಹಾರುವ ಓತಿಯನ್ನು ಇಂಗ್ಲಿಷ್ನಲ್ಲಿ  ಡ್ರಾಕೊ ಎಂದು ಕರೆಯಲಾಗುತ್ತದೆ. 16 ಪ್ರಭೇದಗಳು ಇವುಗಳಲ್ಲಿವೆ. ಕಲವು ಹಾರುವ ಓತಿ 22 ಸೆ.ಮೀ.ಗಿಂತಲೂ ಉದ್ದದವಿರುತ್ತದೆ.  
  • ಹಾರುವ ಡ್ರಾಗನ್ ಮತ್ತು ಡಸ್ಸುಮೀರಿ ಎನ್ನುವ ಪ್ರಭೇದಗಳಲ್ಲಿ ಇವು ಗುರುತಿಸಲ್ಪಟ್ಟಿವೆ. ಇವು ಹೆಚ್ಚಾಗಿ ಮರದ ಪೊಟರೆಗಳಲ್ಲಿ ವಾಸಮಾಡುತ್ತವೆ.
  •  ಓತಿಯ ಬೆನ್ನಮೇಲೆ ಕಂದು ಬಿಳಿ ಮಿಶ್ರಿತ ಬಣ್ಣ ಮತ್ತು ಕೆಳಭಾಗದಲ್ಲಿ ಹಳದಿ ಹಸಿರು ಮಿಶ್ರಿತ ಬಣ್ಣ ಹೊಂದಿರುತ್ತದೆ. ರೆಕ್ಕೆಯ ಮೇಲೆ ಕೆಂಪು ಮತ್ತು ಕಪ್ಪು ಬಣ್ಣದ ಆಕರ್ಶಕ ಪಟ್ಟೆ ಇರುತ್ತದೆ. ರೆಕ್ಕೆಯ ಕೆಳಭಾಗ ಗಂಡಿನಲ್ಲಿ ನೀಲಿ ಮತ್ತು  ಹೆಣ್ಣಿನಲ್ಲಿ ಹಳದಿಯಾಗಿರುತ್ತದೆ. 
  • ಹಾರುವ ಓತಿ ಸಹಜಸ್ಥಿತಿಯಲ್ಲಿದ್ದಾಗ ಹಾರು ರೆಕ್ಕೆ ಮುಚ್ಚಿಕೊಂಡಿರುತ್ತದೆ. ಹೀಗಾಗಿ ಇವುಗಳನ್ನು ಗುರುತಿಸುವುದು ಕಷ್ಟ. ಹಾರುವ ಓತಿಯ ತಲೆಯ ಮೇಲ್ಭಾಗದಲ್ಲಿ ಗರಸದಂತಹ ಚಿಕ್ಕ ಮುಳ್ಳುಗಳು ಬೆನ್ನಿನುದ್ದಕ್ಕೂ ಇಳಿಜಾರು ಆಕಾರದಲ್ಲಿ ಇರುತ್ತವೆ.
  • ಗಲ್ಲದ ಕೆಳಗೆ ಜೋಲು ಚರ್ಮವಿದೆ. ಗಂಡಿನಲ್ಲಿ ಮಧ್ಯದ ಚರ್ಮ ಕೊಂಚ ಉದ್ದವಾಗಿರುತ್ತದೆ. 
ಅಪರೂಪದ ಜೀವಿ
ಹಾರುವ ಓತಿ ವಿಶ್ವದಲ್ಲಿಯೇ ಅವಸಾನದ ಅಂಚಿನಲ್ಲಿರುವ ಅಪರೂಪದ ಸಂತತಿ. ಹೆಚ್ಚೆಂದರೆ ಇದರ ಸಂಖ್ಯೆ 800 ರಿಂದ 1000 ಸಾವಿರ ಇರಬಹುದು ಎಂದು ವನ್ಯ ಜೀವಿ  ಸಂಶೋಧಕರ ಅಭಿಪ್ರಾಯ. ಈ ಹಾರು ಓತಿಯ ಪ್ರಭೇದ ದಕ್ಷಿಣ ಏಷ್ಯಾದ ಫಿಲಿಪೀನ್ಸ್, ಮಲೇಶಿಯಾದಿಂದ ಇಂಡೋನೇಷಿಯಾದ ವರೆಗೂ ಹರಡಿದೆ. ನಮ್ಮ ದೇಶದ ಮಳೆಕಾಡುಗಳಲ್ಲಿ ಇದನ್ನು  ಕಾಣಬಹುದು. ಅದರಲ್ಲೂ ವಿಶೇಷವಾಗಿ  ಪಶ್ಚಿಮ ಘಟ್ಟ ಪ್ರದೇಶದಲ್ಲಿಈ ಓತಿ ಕಾಣಸಿಗುತ್ತದೆ. ಇದು ಉಷ್ಣ ವಲಯದ ಜೀವಿ. ಉಷ್ಣವಲಯದ ಮಳೆ ಬೀಳುವ ಕಾಡುಗಳು ಇದರ ಆವಾಸ ಸ್ಥಾನ.


ಮರದ ಮೇಲೆಯೇ ವಾಸ

ಹಾರುವ ಓತಿ ರೆಕ್ಕೆಯ ಸಹಾಯದಿಂದ ಒಂದು ಮರದಿಂದ ಇನ್ನೊಂದು ಮರಕ್ಕೆ ಹಾರುತ್ತ ಬಹುತೇಕ ಜೀವನವನ್ನು ಮರದ ಮೇಲೆಯೇ ಕಳೆಯುತ್ತವೆ.  ಇವು ಕೇವಲ ಹುಳಹಪ್ಪಟೆ ಮತ್ತು ಗೆದ್ದಲು  ಹುಳುಗಳನ್ನು ಮಾತ್ರ ತಿಂದು ಬದುಕುತ್ತವೆ.  ಇವು ನೆಲಕ್ಕೆ ಇಳಿಯುವುದೇ ಅಪರೂಪವೆನ್ನಬಹುದು. ಹೆಣ್ಣು ಓತಿಗಳು ಮೊಟ್ಟೆ ಇಡುವುದಕ್ಕಾಗಿ ಮಾತ್ರ ಭೂಮಿಗೆ ಇಳಿಯುತ್ತವೆ. ಇವು  ಭೂಮಿಯ ಮೇಲೆ ಕಳೆಯುವುದು  24 ಗಂಟೆಗಳು ಮಾತ್ರ. ತೆಲೆಯ  ಮೂಲಕ ನೆಲದಲ್ಲಿ ಒಂದು ಕುಳಿ ತೋಡಿ ಅದರಲ್ಲಿ 2ರಿಂದ 5 ಮಟ್ಟೆಇಟ್ಟರೆ ಇದರ ಭೂಮಿಯ  ಮೇಲಿನ ಋಣ ತೀರಿದಂತೆ. ತಮ್ಮ ಮರಿಗಳಿಗಾಗಿ ಮತ್ತೆ ಏನನ್ನೂ ಇವು ಮಾಟುವುದಿಲ್ಲ. ಉಳಿದ ಸಮಯದಲ್ಲಿ ಇವು ಮರದ ಮೇಲೆಯೇ ಇರುತ್ತವೆ.