ಹೂವು ಸುಗಂಧವನ್ನಷ್ಟೇ ಅಲ್ಲ ಕೆಟ್ಟ ದುರ್ವಾಸನೆಯನ್ನೂ ಬೀರುತ್ತವೆ ಎಂದರೆ ನಂಬುತ್ತೀರಾ? ಹೌದು, ದುರ್ವಾಸನೆ ಬೀರುವ ಹೂವೊಂದಿದೆ. ಅದೇ ಟೈಟನ್ ಅರಂ ಅಥವಾ ಪಂಜರಗಡ್ಡೆಯ ಹೂ. ಜಗತ್ತಿನ ಅತ್ಯಂತ ದೊಡ್ಡ ಗಾತ್ರದ ಹೂವೆಂದು ಇದು ಗುರುತಿಸ್ಪಟ್ಟಿದೆ. ಈ ಹೂವು ಅರಳಿದರೆ ಮಳೆಗಾಲದ ಮುನ್ಸೂಚನೆ ಎಂದೇ ಭಾವಿಸಲಾಗುತ್ತದೆ. ವರ್ಷದಲ್ಲಿ ಒಮ್ಮೆ ಮಾತ್ರವೇ ಅರಳುವ ಟೈಟನ್ ಅರಂ ಸೌಂದರ್ಯದಿಂದಲೇ ಎಲ್ಲರ ಗಮನ ಸೆಳೆಯುತ್ತದೆ.
ಆದರೆ ಇದರ ಹತ್ತಿರಕ್ಕೆ ಮೂಗು ಮುಚ್ಚಿಕೊಂಡೇ ಹೋಗಬೇಕು!
ಆದರೆ ಇದರ ಹತ್ತಿರಕ್ಕೆ ಮೂಗು ಮುಚ್ಚಿಕೊಂಡೇ ಹೋಗಬೇಕು!
- ಹೂ ಅರಳುವುದು ಹೇಗೆ?
ಎಲ್ಲಾ ಕಾಲದಲ್ಲಿಯೂ ಈ ಹೂವು ಕಾಣ ಸಿಗುವುದಿಲ್ಲ. ಸಾಮಾನ್ಯವಾಗಿ ಎಪ್ರಿಲ್, ಮೇ ತಿಂಗಳಿನಲ್ಲಿ ಮಳೆ ಬಿದ್ದೊಡನೆ ವಾತಾವರಣದಲ್ಲಿ ಆರ್ದ್ರತೆ ಉಂಟಾಗುತ್ತದೆ. ಈ ಸಮಯದಲ್ಲಿ ನೆಲದೊಳಗಿದ್ದ ಕಾಡು ಪಂಜರದ ಗಡ್ಡೆ ಮೊಗ್ಗಾಗಿ ಹೊರಬಂದು ಅರಳುತ್ತದೆ. 2 ವರ್ಷದಷ್ಟು ಹಳೆಯದಾದ ಕಾಡು ಪಂಜರ ಅಥವಾ ಸುವರ್ಣ ಗಡ್ಡೆಗೆ ಈ ಹೂವು ಅರಳುತ್ತದೆ. ಭೂಮಿಯ ಆಳದಲ್ಲಿ ಹೂತಿದ್ದ ಗಡ್ಡೆಗೆ ಮೊದಲ ಮಳೆಯ ಸ್ಪರ್ಶ ತಾಕಿದೊಡನೆ ಕಾಡು ಪಂಜರಗಡ್ಡೆಯಿಂದ ಹೂವು ಅರಳಿ ನಿಲ್ಲುತ್ತದೆ. ಯಾರಿಗೂ ಗೊತ್ತಾಗದ ರೀತಿಯಲ್ಲಿ ದಿಢೀರನೆ ಎದ್ದು ನಿಲ್ಲುತ್ತದೆ. ಇದು ಕೆಲವೊಮ್ಮೆ 7ರಿಂದ 10 ಅಡಿ ಎತ್ತರದವರೆಗೂ ಬೆಳೆಯಬಲ್ಲದು. ಸುತ್ತಮುತ್ತಲೂ ಇದರ ವಾಸನೆ ಹರಡಿದಾಗಲೇ ಹೂವು ಅರಳಿದ್ದು ಅರಿವಾಗುತ್ತದೆ.
- ಎರಡು ದಿನದ ಬಾಳು!
ಎರಡು ವರ್ಷಗಳಕಾಲ ಗಡ್ಡೆ ಮಣ್ಣಿನೊಳಗೇ ಇದ್ದರೆ ಹೂ ಬಿಡುವ ಸಾದ್ಯತೆ ಹೆಚ್ಚು.ಎರಡು ವರ್ಷದ ಬಳಿಕ ಅರಳಿದರೂ ಇದರ ಬಾಳು ಎರಡೇ ಎರಡು ದಿನದ್ದು. ಅಂದರೆ ಕೇವಲ 48 ಗಂಟೆ ಮಾತ್ರ. ಕಾಡಿನ ಮಧ್ಯದಲ್ಲೆಲ್ಲೋ ಅರಳಿ ನಿಂತು ಸುತ್ತಮುತ್ತಲೂ ಕೊಳೆತ ಶವದ ವಾಸನೆ ಹರಡುತ್ತದೆ. ಹೀಗಾಗಿ ಇದನ್ನು ಶವದ ಹೂ (ಕಾರ್ಪ್ಸ್ ಫ್ಲವರ್) ಎನ್ನಯವ ಹೆಸರಿನಿಂದ ಕರೆಯಲಾಗುತ್ತದೆ. ಸಮದ್ರ ಮಟ್ಟದಿಂದ ಸುಮಾರು 120ರಿಂದ 365 ಮೀಟರ್ ಎತ್ತರದಲ್ಲಿ ಮಾತ್ರ ಹೂವು ಅರಳುತ್ತದೆ.
ಇನ್ನೊಂದು ವಿಶೇಷತೆಯೆಂದರೆ ಈ ಗಿಡದಲ್ಲಿರುವುದು ಒಂದೇ ಒಂದು ದೈತ್ಯಾಕಾರದ ಎಲೆ ಮಾತ್ರ. ಈ ಎಲೆಯೇ ಹೂವಿನ ಆಕಾರದಲ್ಲಿ ಸುರುಳಿ ಸುತ್ತಿಕೊಂಡಿರುತ್ತದೆ. ಕೆಲವೊಂದು ಗಿಡದ ಎಲೆ ಸುಮಾರು 6 ಮೀಟರ್ (20 ಅಡಿ) ದೊಡ್ಡದಾಗಿರುತ್ತದೆ. ಈ ಹೂವು ತನ್ನ ದುರ್ವಾಸನೆಯಿಂದ ಪರಾಗಸ್ಪರ್ಶಕ್ಕೆ ನೆರವಾಗುವ ವಿಶಿಷ್ಟ ಜಾತಿಯ ಕೀಟಗಳನ್ನು ಆಕರರ್ಷಿಸುತ್ತದೆ. ಪರಾಗಸ್ಪರ್ಶದ ಬಳಿಕ ಹೂವು ಮರೆಯಾಗಿ ಅದೇ ಜಾಗದಲ್ಲಿ ಅರ್ಧ ಮೀಟರ್ ಎತ್ತರದ ಹಣ್ಣಿನಗೊಂಚಲಿನ ಗಿಡ ಎದ್ದುನಿಲ್ಲುತ್ತದೆ. ಭೂಮಿಯ ಒಳಗೆ ಸಂಗ್ರಹವಾದ ಇದರ ಗಡ್ಡೆ ಸುಮಾರು 75 ಕೇ.ಜಿಯ ತನಕವೂ ತೂಗುತ್ತದೆ. ಕೆಲವೊಂದು ಗಡ್ಡೆ (ಸುವರ್ಣ ಗಡ್ಡೆ) ತರಕಾರಿಯಾಗಿಯೂ ಬಳಸುತ್ತಾರೆ. ಹೂವಿನ ಮೇಲೆ ಕಂದು
ವೆಲ್ವೆಟ್ ವಸ್ತ್ರವನ್ನು ಹೊದೆಸಿ ಇಟ್ಟಂತೆ ಕಾಣುತ್ತದೆ. ಈ ಹೂವು ಪೂರ್ಣ ಅರಳಿದ ಮೇಲೆ ವಾಸನೆ ಇರುವುದಿಲ್ಲ. ಈ ಹೂವು ಹೆಚ್ಚಾಗಿ ರಾತ್ರಿಯ ವೇಳೆ ಅರಳುತ್ತದೆ. ಅಲ್ಲದೇ ಗಡ್ಡೆಯಲ್ಲಿದ್ದ ಬಿಸಿಗಾಳಿಯನ್ನು ಹೊರಹಾಕುತ್ತದೆ.
ಪಂಜರ ಗಡ್ಡೆಯ ಹೂವು ವಾಸನೆ ಸೂಸಿದರೂ, ಎರಡೇ ದಿನದ ಬದುಕಿದರೂ ಸಹಸ್ರಾರು ಜನರ ಗಮನ ಸೆಳೆಯುತ್ತದೆ.