ಜೀವನಯಾನ

Sunday, June 10, 2012

ರಕ್ತಹೀರಿ ಬದುಕುವ ಜಿಗಣೆ

ಕ್ತ ಹೀರುವುದು ಜಿಗಣೆಯ ಸ್ವಾಭಾವಿಕ ಗುಣ. ರಕ್ತವೇ ಇದರ  ಆಹಾರ. ರಕ್ತ ಹೀರಲು ಇದರ ದೇಹದ ಎರಡೂ ಕೊನೆಯಲ್ಲೂ ಒಂದು ಹೀರುಕೊಳವೆ ಇರುತ್ತೆ. ಎರಡು ಹೀರುಕೊಳವೆಗಳನ್ನೂ ತಾನು ರಕ್ತ ಹೀರುವ ಪ್ರಾಣಿಯ ಚರ್ಮದ ಮೇಲೆ ಊರಿ, ಗೋಂದು ಹಾಕಿ ಅಂಟಿಸುತ್ತೆ. ಯಾವುದರಿಂದ ಬೇಕಾದರೂ ರಕ್ತ ಹೀರಬಲ್ಲ ಸಾಮಥ್ರ್ಯ ಜಿಗಣೆಗೆ ಇದೆ. 
ಮಲೆನಾಡು ಪ್ರದೇಶದ ನೀರಿನ ಹರಿವು ಜಾಸ್ತಿ ಇರುವ ಜಾಗದಲ್ಲಿ ಜಿಗಣೆಗಳು ಕಾಲಿಗೆ ಎಡತಾಕುತ್ತವೆ. ಹಿಡಿದ ಕೆಲಸವನ್ನು ಬಿಡದಂತೆ ಮಾಡುವವರಿಗೆ ಜಿಗಣೆ ಥರ ಇದ್ದಾನೆ ಎನ್ನುತ್ತೇವೆ. 

  •  ಕಚ್ಚಿದರೆ ನೋಯುವುದಿಲ್ಲ
  ಅನೇಕಬಾರಿ ಜಿಗಣೆಗಳು ಕಚ್ಚಿದ್ದು ನಮಗೆ ತಿಳಿಯುವುದಿಲ್ಲ. ಏಕೆಂದರೆ ಇವು ಕಚ್ಚಿದರೆ ನೋವಾಗುವುದಿಲ್ಲ. ಪ್ರಾಣಿಯ ಮೈಗೆ ಅಂಟಿಕೊಂಡ ನಂತರ ರಕ್ತ ಸ್ರಾವವು ನಿಲ್ಲದಂತೆಮಾಡಲು ಹಿಸ್ಟಮೀನ್ಗಳನ್ನು, ಹಿರುಡಿನ್ಗಳನ್ನು ಮತ್ತು ರಕ್ತ ಹೆಪ್ಪುಗಟ್ಟದಂತ ದೃವ್ಯಗಳನ್ನು ಬಾಯಿಯಿಂದ ಹೊರಹಾಕುತ್ತದೆ. ಹಾಗಾಗಿಯೇ ಜಿಗಣೆ ಕಚ್ಚಿಬಿಟ್ಟ ನಂತರ ಬಹಳಹೊತ್ತು ರಕ್ತ ಸ್ರಾವವಾಗುತ್ತಲೇ ಇರುತ್ತದೆ. ರಕ್ತ ಹೀರುತ್ತ ಹೀರುತ್ತ ಜಿಗಣೆಯ ದೇಹ ಊದಿಕೊಂಡು ಗಾಳಿತುಂಬಿದ ಬಲೂನ್ ನಂತಾಗುತ್ತದೆ. ನಂತರ ತಾನೇ ಬಿಟ್ಟು ಬಿಡುತ್ತದೆ. ಜಿಗಣೆಕಚ್ಚಿದಾಗ ಬಹಳಷ್ಟು ರಕ್ತ ಹೋದಂತೆ ಅನಿಸುತ್ತದೆ. ಆದರೆ ಅದು ತಪ್ಪು. ವಾಸ್ತವವಾಗಿ ಬಹಳ ಕಡಿಮೆ ರಕ್ತವನ್ನು ಜಿಗಣೆ ಹೀರುತ್ತದೆ. ಇವು ರಕ್ತ ಹೀರುವುದರಿಂದ ಯಾವುದೇ ರೀತಿಯ ಖಾಯಿಲೆಗಳು ಹರಡುವುದಿಲ್ಲ. ಕಚ್ಚಿದ ಜಾಗದಲ್ಲಿ ಕೆಲವೊಮ್ಮೆ ತುರಿಕೆಗಳು ಉಂಟಾಗುತ್ತವೆ.
 
  • ರೋಗ ನಿವಾರಣೆ
ಜಿಗಣೆಗಳು ರೋಗವನ್ನು ನಿವಾರಿಸುತ್ತವೆ ಎಂಬ ನಂಬಿಕೆ ಮೊದಲಿನಿಂದಲೂ ಇದೆ. ಕ್ರಿಸ್ತ ಪೂರ್ವ ಒಂದು ಸಾವಿರ ವರ್ಷಗಳ ಹಿಂದೆಯೇ ಚಿಕಿತ್ಸೆಗಳಲ್ಲಿ ಜಿಗಣೆಗಳನ್ನು ಬಳಸಲಾಗಿದೆ. ಪ್ರಾಚೀನ ಭಾರತದ ವೈದ್ಯ ಪದ್ಧತಿಗಳಲ್ಲಿ ರಕ್ತಗಳನ್ನು ತೆಗೆಯಲು ಜಿಗಣೆಗಳು ಬಳಕೆಯಾಗುತ್ತಿದ್ದವು.  ಆಯುರ್ವೇದ ಶಾಸ್ತ್ರದಲ್ಲಿ ಚಿಕಿತ್ಸೆಗಾಗಿ ಈ ಜೀವಿಯ ಬಳಕೆ ಸಾವಿರಾರು ವರ್ಷಗಳಿಂದ ನಡೆದುಬಂದಿದೆ. ಸಕ್ಕರೆ ಖಾಯಿಲೆಯಿಂದ ಉಂಟಾದ ಗ್ಯಾಂಗ್ರೀನ್ ಗುಣಪಡಿಸಲು ಈಗಲೂ ಇವುಗಳನ್ನು ಬಳಸಲಾಗುತ್ತಿದೆ. ದೇಹದ ಉಷ್ಣಾಂಶವನ್ನು ಕಡಿಮೆ ಮಾಡಿ ಸಮತೋಲನ ಕಾಪಾಡಲು ಇವು ನೆರವಾಗುತ್ತವೆ.

  • ಮಳೆಗಾಲದಲ್ಲಿ ಬರುವ ಅಥಿತಿ 
ಅತಿಯಾಗಿ ಮಳೆಯಾಗುವ ಪ್ರದೇಶದಲ್ಲಿ ಮಾತ್ರ ಇವು ಕಂಡುಬರುತ್ತವೆ. ಮಳೆಯಾಗದ ಕಾಲದಲ್ಲಿ, ಬರಗಾಲದಲ್ಲಿ, ಬೇಸಿಗೆಯಲ್ಲಿ, ಜಿಗಣೆಗಳು ಅಜ್ಞಾತವಾಸಕ್ಕೆ ಹೊರಟು ಹೋಗುತ್ತವೆ -ಮಣ್ಣೊಳಗೆ. ದೇಹದ ತೂಕ ಶೇ. 90ರಷ್ಟು ಇಳಿದರೂ ಇವು ಜೀವಂತವಾಗಿ ಇರಬಲ್ಲವು. ಮಳೆ ಬಂದಾಗ ಮತ್ತೆ ಪ್ರತ್ಯಕ್ಷಗೊಂಡು ಯಾವುದಾದರೂ ಪ್ರಣಿಯು ನಡೆದಾಡುತ್ತಿದ್ದರೆ ಅದರ ಮೇಲೆ ಹತ್ತಿಬಿಟ್ಟು ಹಬ್ಬದೂಟ ಸವಿಯುತ್ತವೆ. ಹಾಗೆಂದು ಇವು ಪದೇ ಪದೇ ರಕ್ತ ಹೀರುವುದಿಲ್ಲ. ತನಗೆ ಬೇಕಾದಷ್ಟನ್ನು ಒಮ್ಮೆಲೇ ಹೀರಿಬಿಡುತ್ತವೆ.

ಇವು ತಮ್ಮ ತೂಕಕ್ಕಿಂತ 5 ಪಟ್ಟು ಜಾಸ್ತಿ ರಕ್ತ ಹೀರಬಲ್ಲದು. ಹೆಚ್ಚುಳಿದ ಪೌಷ್ಠಿಕಾಂಶಗಳನ್ನು ತನ್ನಲ್ಲಿಯೇ ಸಂಗ್ರಹಿಸಿ ಇಟ್ಟುಕೊಳ್ಳುತ್ತದೆ. ಒಮ್ಮೆ ಕಂಠಪೂರ್ತಿ ರಕ್ತ ಹೀರಿದ ಬಳಿಕ ಒಂದು ವರ್ಷದ ತನಕ ಆಹಾರವಿಲ್ಲದೇ ಇರಬಲ್ಲವು. ಈವೇಳೆ ಸಂಗ್ರಹಿಸಿಟ್ಟ ಆಹಾರವನ್ನೇ ಬಳಸಿಕೊಳ್ಳುತ್ತವೆ. ಸಾಮಾನ್ಯವಾಗಿ ಇವು 7 ಮಿ.ಮೀಟರ್ ನಿಂದ 25 ಸೆಂಟಿ ಮೀಟರ್ ನಷ್ಟು ಉದ್ದವಿರುತ್ತವೆ. ಜಿಗಣೆಗಳಲ್ಲಿ 650 ಜಾತಿಗಳನ್ನು ಗುರುತಿಸಲಾಗಿದೆ. ಉಪ್ಪಿಲ್ಲದ ನೀರಿನಲ್ಲಿ, ಕೆಸರು ಪ್ರದೇಶಗಳಲ್ಲಿ ಕಾಣಿಸುವ ಜಿಗಣೆ ಮಾಲಿನ್ಯ ಸೂಚಕವೂ ಹೌದು. ಯಾವ ಕಾಡಿನಲ್ಲಿ ಜಿಗಣೆಗಳು ಹೆಚ್ಚು ಕಂಡುಬರುತ್ತವೆಯೋ ಆ ಕಾಡುಗಳು ಅತ್ಯಂತ ಕಡಿಮೆ ಮಾಲಿನ್ಯದಿಂದ ಕೂಡಿದೆ ಎಂದು ಅರ್ಥ. ಲಿಂಬೆ ಹಣ್ಣಿನ ರಸವನ್ನು ಕಾಲಿಗೆ ಲೇಪಿಸಿ ಕೊಳ್ಳುವುದರಿಂದ ಇವುಗಳ ಕಡಿತದಿಂದ ಪಾರಾಗಬಹುದು.

No comments:

Post a Comment