ಜೀವನಯಾನ

Sunday, April 22, 2012

ದೈತ್ಯ ಅನಕೊಂಡ

 ಪ್ರಪಂಚದಲ್ಲಿಯೇ ಅತಿ ದೊಡ್ಡ  ಹಾವು ಅನಕೊಂಡ. ಇದು ಹೆಬ್ಬಾವಿಗಿಂತಲೂ ಉದ್ದ ಮತ್ತು ಭಾರ. 

ಈ ಹಾವು ಎನೆಕ್ಟಸ್ ಎನ್ನವ ಪ್ರಜಾತಿಗೆ ಸೇರಿದೆ. ಇದು ಉತ್ತರ ಅಮೆರಿಕದ ಅಮೆಜಾನ್ ಮಳೆಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅನಕೊಂಡದ ವಿಶೇಷತೆಯೆಂದರೆ ಬೇಟೆಯನ್ನು ಕಚ್ಚಿ ಸಾಯಿಸುವ ಬದಲಾಗಿ ಉಸಿರುಗಟ್ಟಿಸಿ ಸಾಯುವವವರೆಗೂ ದೇಹದಿಂದ ಸುತ್ತಿಕೊಳ್ಳುತ್ತದೆ. ಈ ಹಾವಿಗೆ ಯಾವುದೇ ವಿಷವಿರುವುದಿಲ್ಲ. ಹೀಗಾಗಿ ಕಚ್ಚಿದರೂ ಯಾವುದೇ ಅಪಾಯ ಇಲ್ಲ. ಬೇಟೆ ಎಷ್ಟೇ ದೊಡ್ಡದಾಗಿದ್ದರೂ ಸಹ ತನ್ನ ದವಡೆ ಮತ್ತು ದೇಹವನ್ನು ಹಿಗ್ಗಿಸಿ ಇಡಿಯಾಗಿ ನುಂಗುತ್ತದೆ. ಒಮ್ಮೆ ದೊಡ್ಡ ಪ್ರಾಣಿಯನ್ನು ನುಂಗಿದರೆ ಅದು ಸಂಪೂರ್ಣ ಜೀರ್ಣವಾಗುವವರೆಗೆ ತಿಂಗಳುಗಟ್ಟಲೇ ಏನನ್ನೂ ತಿನ್ನುವುದಿಲ್ಲ.

ಆಳಸಿ ಸ್ವಭಾವದವು:

ಇದೊಂದು ಉಭಯವಾಸಿ. ನೀರಿನ ಹತ್ತಿರದಲ್ಲಯೇ ಇರಲು ಅನಕೊಂಡ ಇಷ್ಟ ಪಡುತ್ತದೆ. ನೀರಿನಲ್ಲಿ ಅನಕೊಂಡ ಅತ್ಯಂತ ಬಲಶಾಲಿ. ಅನಕೊಂಡ ತನ್ನ ದೇಹ ಕಾಣಿಸದಂತೆ ನೀರಿನಲ್ಲಿ ಈಜುತ್ತದೆ. 10 ನಿಮಿಷಗಳಕಾಲ ನೀರಿನಲ್ಲಿ ಉಸಿರನ್ನು ತಡೆಹಿಡಿಯಬಲ್ಲದು. ನೆಲದ ಮೇಲಿದ್ದಾಗ ಅತ್ಯಂತ ನಿಧಾನ ಮತ್ತು ಆಳಸಿ ಸ್ವಭಾವದವು. ಅನಕೊಂಡ ನೀರಿನಲ್ಲಿರುವುದು ಗುತ್ತೇ ಆಗುವುದಿಲ್ಲ. ಅಷ್ಟೊಂದು ನಿಶ್ಚಲವಾಗಿ ಇರಬಲ್ಲವು. ಈ ಹಾವಿಗೆ ಕಣ್ಣು ಮತ್ತು ಮೂಗು ತಲೆಯ ಮೇಲಿದೆ. ನೀರಿನಲ್ಲಿ ಮುಳುಗಿಕೊಂಡಿದ್ದಾಗ ತೆಲೆಯನ್ನಷ್ಟೇ ಮೇಲೆ ಮಾಡಿ ಶಿಕಾರಿಗಾಗಿ ಹೊಂಚುಹಾಕುತ್ತದೆ. ಇವು ತಾವಾಗಿಯೇ ಆಹಾರ ಹುಡುಕಿಕೊಂಡು ಹೋಗುವುದಿಲ್ಲ. ಹಕ್ಕಿಗಳು ಅಥವಾ ಇತರ ಪ್ರಾಣಿಗಳು ನೀರು ಕುಡಿಯಲು ಬರುವವರಗೂ ಕಾಯುತ್ತದೆ. ನೀರಿನಲ್ಲಿದ್ದಾಗ ಯಾರಿಗೂ ಕಾಣುವುದಿಲ್ಲ. ಏಕೆಂದರೆ ಅನಕೊಂಡ ಆಳವಿಲ್ಲದ ಕೆಸರು ನೀರಿನಲ್ಲಿ ಹುದುಗಿಕೊಂಡಿರುತ್ತದೆ. ಇದಕ್ಕೆ ತಕ್ಕಂತೆ ಹಸಿರು ಬಣ್ಣದ ಮೈಮೇಲೆ ಕಪ್ಪು ಮಚ್ಚೆಗಳನ್ನು ಹೊಂದಿದೆ. ಬೇರೆ ಹಾವುಗಳಂತೆ ಅನಕೊಂಡ ಮೊಟ್ಟೆಯಿಡುವುದಿಲ್ಲ. ಮೊಟ್ಟೆಯನ್ನು ತನ್ನಲೇ ಉಳಿಸಿಕೊಂಡು ನೇರವಾಗಿ ಮರಿಗಳನ್ನು ಇಡುವುದು ಇವುಗಳ ವೈಶಿಷ್ಟ್ಯ. ಒಂದು ಸಲಕ್ಕೆ 24 ರಿಂದ 35 ಮರಿಗಳಿಗೆ ಜನ್ಮ ನೀಡುತ್ತದೆ. ಅನಕೊಂಡದ ಮರಿಗಳು 2 ಅಡಿಯಷ್ಟು ದೊಡ್ಡದಾಗಿರುತ್ತದೆ. ಮರಿಗಳು ಹುಟ್ಟಿದಕೂಡಲೇ ನೀರಿನಲ್ಲಿ ಈಜುವ ಮತ್ತು ಆಹಾರ ಹುಡುಕುವ ಸಾಮಥ್ರ್ಯ ಹೊಂದಿರುತ್ತವೆ.

ಮೈಯನ್ನು ಸುತ್ತಿಕೊಂಡಿರುತ್ತದೆ



ಈ ಹಾವು ದೇಹವನ್ನು ಯಾವಾಗಲೂ ಸುತ್ತಿಕೊಂಡಿರುತ್ತದೆ. ಕಪ್ಪೆ, ಮೀನು, ಹಂಸ, ಹಂದಿ, ಕರಟಿ ಮುಂತಾದ ಪ್ರಾಣಿಗಳನ್ನು ಒಂದೇ ಉಸಿರಿಗೆ ತಿಂದುಮುಗಿಸುತ್ತದೆ ಅನಕೊಂಡ. ಒಮ್ಮೆ ಇದರ ಹಿಡಿತಕ್ಕೆ ಸಿಕ್ಕರೆ ಬಿಡಿಸಿಕೊಳ್ಳಲು ಸಾಧ್ಯವೇ ಇಲ್ಲ. ಅನಕೊಂಡ ಕೆಲವುಬಾರಿ ಮಾನವವನ್ನೂ ತಿಂದುಮುಗಿಸಿದ ಉದಾಹರಣೆಯಿದೆ. ಅನಕೊಂಡ ಪ್ರತಿದಿನ 20 ಕೆ.ಜಿಯಷ್ಟು ಆಹಾರ ತಿನ್ನುತ್ತದೆ. ಆಹಾರವನ್ನು ತಿಂದಾಗ ದೇಹದ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತದೆ. 
ಅನಕೊಂಡದಲ್ಲಿ ನಾಲ್ಕು ಪ್ರಕಾರಗಳಿವೆ. ಬೊಲ್ವಿಯನ್ ಅನಕೊಂಡ. ಕಪ್ಪು, ಹಸಿರು, ಮತ್ತು ಹಳದಿ ಬಣ್ಣದ ಅನಕೊಂಡ. ಇದರಲ್ಲಿ ಹಸಿರು ಅನಕೊಂಡ ಎಲ್ಲದಕ್ಕಿಂತ ಭಾರ. ಇದರ ಸರಾಸರಿ ಉದ್ದ 30 ಅಡಿ. ತೂಕ ಸುಮಾರು 227 ಕೆ.ಜಿ. ಹೆಣ್ಣು ಅನಕೊಂಡ ಗಂಡಿಗಿಂತಲೂ ದೊಡ್ಡದಾಗಿರುತ್ತದೆ. ಅನಕೊಂಡ ಅನೇಕ ವಾರಗಳವರೆಗೆ ಆಹಾರವಿಲ್ಲದೇ ಇರಬಲ್ಲದು. ಅನಕೊಂಡ ಸಾಯುವ ವರೆಗೂ ಬೆಳೆಯುತ್ತಲೇ ಇರುತ್ತದೆ. ಪ್ರತೀವರ್ಷವೂ ಇದರ ಗಾತ್ರ ಜಾಸ್ತಿಯಾಗುತ್ತದೆ. ಅನಕೊಂಡ 15 ರಿಂದ 30 ವರ್ಷ ಬದುಕುತ್ತದೆ.

ಅನಕೊಂಡದ ಚರ್ಮಕ್ಕೆ ಭಾರೀ ಬೇಡಿಕೆ ಇದೆ. ಒಂದು ಅನಕೊಂಡ ಮಾರುಕಟ್ಟೆಯಲ್ಲಿ 50 ಸಾವಿರ ಡಾಲರ್ ನಷ್ಟು ಬೆಲೆಬಾಳುತ್ತದೆ. ಇದು ಇನ್ನೂ ಅಳಿವಿನಂಚಿಗೆ ತಲುಪದ ಕಾರಣ ಕಾನೂನುಬದ್ಧವಾಗಿಯೇ ಅನಕೊಂಡವನ್ನು ಬೇಟೆಯಾಡಲಾಗುತ್ತದೆ.



 

Saturday, April 14, 2012

ಅಮೆಜಾನ್ ಎಂಬ ಅದ್ಭುತ ಲೋಕ...

ಅಮೆಜಾನ್ ಕಾಡುಗಳಲ್ಲಿ ಸೂರ್ಯನ ಬೆಳಕು ಭೂಮಿಗೆ ತಾಕುವುದೇ ಇಲ್ಲ. ಅಷ್ಟು ದಟ್ಟ ಅರಣ್ಯ ಅದು. ಅಲ್ಲಿವರ್ಷವಿಡಿ ಮಳೆಯಾಗುತ್ತಲೇ ಇರುತ್ತದೆ. ಅದಕ್ಕೆ ಇಲ್ಲಿನ ಕಾಡುಗಳಿಗೆ ಮಳೆಕಾಡು ಎನ್ನುವ ಹೆಸರು ಬಂದಿದೆ. ಇದು ತರಹೇವಾರಿ ಜೀವವೈವಿಧ್ಯದ ತಾಣ.

ದಕ್ಷಿಣ ಅಮೆರಿಕದ ಎಂಟು ರಾಷ್ಟ್ರಗಳಾದ ಬ್ರೆಜಿಲ್, ಬೊಲಿವಿಯಾ,ಕೊಲಂಬಿಯಾ, ಇಕ್ವೆಡಾರ್, ವೆನಿಜುವೆಲಾ, ಗಯನಾ, ಸುರಿನಾಮ್,  ಪರುಗಳನ್ನು ಮಳೆಕಾಡುಗಳು ಆವರಿಸಿ ಕೊಂಡಿದೆ. ಅಮೆಜಾನ್ ಜಗತ್ತಿನ ಅತಿದೊಡ್ಡ ಮಳೆಕಾಡು ಎನಿಸಿಕೊಂಡಿದೆ. ಭೂಮಿಯ 14% ಭಾಗ ಮಳೆಕಾಡುಗಳಿಂದ ಆವೃತವಾಗಿದೆ. ಜಗತ್ತಿನ ಅರ್ಧಕ್ಕಿಂತ ಹೆಚ್ಚು ಪ್ರಾಣಿ ಮತ್ತು ಸಸ್ಯ ಸಂಕುಲಗಳು ಇಲ್ಲಿ ಕಂಡುಬರುತ್ತವೆ. ಈ ಕಾಡುಗಳು ಸೃಷ್ಟಿಯಾಗಲು ಲಕ್ಷಾಂತರ ವರ್ಷಗಳೇ ಹಿಡಿದಿವೆ. ಸಮಭಾಜಕ ವೃತ್ತದ ಆಸುಪಾಸಿನಲ್ಲಿ ಮಳೆಕಾಡುಗಳು ಸೃಷ್ಟಿಯಾಗುತ್ತವೆ.

ಅಮೆಜಾನ್ ನದಿ: ಈ ನದಿ ಅಮೆಜಾನಿನ ಎಂಟು ರಾಷ್ಟ್ರಗಳಿಗೆ ಜೀವಸೆಲೆಯಾಗಿದೆ. ಈ ನದಿಯ ದಂಡೆಯಮೇಲೆ ಬ್ರೆಜಿಲ್ನ ಪ್ರಸಿದ್ಧ ನಮಾಸ್ ಎನ್ನುವ ನಗರವಿದೆ. ಈ ಅದ್ಭುತ ನದಿ ಉಗಮ ಸ್ಥಾನದಿಂದ ಒಟ್ಟೂ 1, 600 ಕಿ.ಮಿ ದೂರ ಸಾಗಿ ಅಟ್ಲಾಂಟಿಕ್ ಮಹಾಸಾಗರದಲ್ಲಿ ಕೊನೆಗೊಳ್ಳುತ್ತದೆ. ಜಗತ್ತಿನ ಅತೀ ಉದ್ದದ ನದಿಗಗಳಲ್ಲಿಅಮೆಜಾನ್ ನದಿ ಸಹ ಒಂದು. 3 ಸಾವಿರ ಜಾತಿಯ ಮೀನುಗಳು ನದಿಯ ಒಡಲಲ್ಲಿವೆ. ಇನ್ನೂ ಕಂಡುಹಿಡಿಯಲಾಗದ ಎಷ್ಟೋ ಸಂಗತಿಗಳು ಈ ನದಿ ಒಳಗೊಂಡಿದೆ. ಈ ನದಿಯಾವಾಗಲು ಕೆಂಪಾಗಿಯೇ ಹರಿಯುತ್ತದೆ. 



ಅಮೆಜಾನ್ ಕಾಡಿನ ವಿಶೇಷತೆಗಳು.

  1. ಇಲ್ಲಿ ಬಿಸಿಲು ಮತ್ತು ಸೆಕೆ  ಅತ್ಯಂತ ಜಾಸ್ತಿ. ಇಲ್ಲಿನ ಸರಾಸರಿ ತೇವಾಂಶ 79 ಡಿಗ್ರಿ. ಇಲ್ಲಿ ವಾತಾವರಣ ಒಮ್ಮಲೇ ಬದಲಾಗುತ್ತದೆ. ಈ ಜಾಗದಲ್ಲಿ ಪದೆ ಪದೆ ಬಿಸಿಲು ಮಳೆ ಉಂಟಾಗುತ್ತದೆ.
  2.  ಈ ಕಾಡುಗಳಲ್ಲಿ ಸದಾ ಹೇರಳ ಮಳೆಯಾಗುವ ಕಾರಣ ಮಳೆಗಾಲದಲ್ಲಿ ನದಿಯ ಪ್ರವಾಹ 30 ರಿಂದ 40 ಅಡಿಗೆ ಏರುತ್ತದೆ. ಹೀಗಾಗಿ ಬಹುತೇಕ ಅರಣ್ಯ ಪ್ರದೇಶ ನೀರಿನಿಂದಲೇ ಆವೃತ್ತವಾಗಿರುತ್ತದೆ.
  3.  ಅಮೆಜಾನ್ನಲ್ಲಿ 4 ಲಕ್ಷ 38 ಸಾವಿರ ಜಾತಿಯ ಜೀವ ಸಂಕುಲಗಳಿವೆ. ಇಲ್ಲಿ ಕಂಡು ಬರುವಷ್ಟು ವೈವಿಧ್ಯಮಯ ಜೀವ ಸಂಕುಲ ಪ್ರಪಂಚದ ಬೇರೆಯಾವುದೇ ಭಾಗದಲ್ಲಿ ಕಂಡುಬರಲು ಸಾಧ್ಯವೇ ಇಲ್ಲ. ಇಲ್ಲಿನ ಅದೆಷ್ಟೋ ಜೀವಿಗಳನ್ನು ವಿಜ್ಞಾನಿಗಳು ಇನ್ನೂ ಪತ್ತೆಹಚ್ಚಿಲ್ಲ. ಇನ್ನೂ ಕಂಡು ಹಿಡಿಯದ ಲಕ್ಷಾಂತರ ಸಸ್ಯ ಪ್ರಭೇದಗಳು ಇಲ್ಲಿವೆ. ಅಮೇಜಾನ್ ಅನಾಕೊಂಡಾ ಹಾವುಗಳಿಗೆ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಅರಣ್ಯ ಅತ್ಯಂತ ಅಪಾಯಕಾರಿ ಇಲ್ಲಿ ವಿಷಪೂರಿತ ಸಸ್ಯ ಮತ್ತು ಪಾಣಿಗಳೇ ಹೆಚ್ಚಾಗಿವೆ. ವಿಷಹಾರಿಸುವ ಕಪ್ಪೆಗಳ ವಿಭಿನ್ನ ಪ್ರಭೇದಗಳು ಇಲ್ಲಿ ಮಾತ್ರ ಕಂಡುಬರುತ್ತದೆ.
  4. ಇಲ್ಲಿ ಒಂದು ಚದರ್ ಮೈಲಿ ಅಂತರದಲ್ಲಿ ಸಾವಿರಾರು ಬಗೆಯ ಸಸ್ಯಗಳು ಕಾಣಸಿಗುತ್ತದೆ. ಆಕಾಶದೆತ್ತರದ ಮರಗಳೇ ಇಲ್ಲಿ ಜಾಸ್ತಿ. ಇಲ್ಲಿ ವನಸ್ಪತಿ ಸಸ್ಯಗಳೂ ಸಹ ಅಘಾದ ಪ್ರಮಾಣದಲ್ಲಿದೆ. ಇಲ್ಲಿನ ಬುಡಕಟ್ಟು ಜನಾಂಗ ಔಷಧಿಗಾಗಿ ಇವುಗಳನ್ನು ಉಪಯೋಗಿಸುತ್ತಾರೆ.
  5. ಇದುವರೆಗೆ ಅಮೆಜಾನ್ ಕಾಡಿನಲ್ಲಿ 2,180 ಜಾತಿಯ ಮೀನುಗಳು, 1294 ಜಾತಿಯ ಪಕ್ಷಿಗಳು, 427 ಬಗೆಯ ಸಸ್ತನಿಗಳು, 428 ಉಬಯಚರಿಗಳನ್ನು, 378 ಬಗೆಯ ಸರಿಸೃಪಳನ್ನಷ್ಟೇ ಗುರುತಿಸಲಾಗಿದೆ. ಅಮೆಜಾನ್ನಲ್ಲಿ ಒಟ್ಟೂ 2.5 ಕೋಟಿ ಜೀವ ಪ್ರಭೇದಗಳಿವೆ ಎಂದು ಅಂದಾಜಿಸಲಾಗಿದೆ. ಜಗತ್ತಿನ 5/1ರಷ್ಟು ಜೀವ ಸಂಕುಲ ಅಮೆಜಾನ್ಒಂದರಲ್ಲಯೇ ಕಂಡುಬರುತ್ತದೆ.
 ಅರಣ್ಯ ನಾಶ: ಇಂಥಹ ದಟ್ಟಾಕಾಡು ಸಹ ಮಾನವನ ಸ್ವಾರ್ಥಕ್ಕೆ ಬರಿದಾಗುತ್ತಿದೆ. ಇಲ್ಲಿ ಗಣಿಗಾರಿಕೆ, ಕೃಷಿ ಚಟುವಟಿಕೆ, ಮನೆಗಳ ನಿರ್ಮಾಣ ಕೈಗಾರಿಕೆಗಳ ಸ್ಥಾಪನೆ ಅವ್ಯಾಹತವಾಗಿ ಮುಂದುವರಿದಿದೆ. ಇದಕ್ಕಾಗಿ ಪ್ರತಿವರ್ಷ 13 ಸಾವಿರ ಮೈಲಿ ಅರಣ್ಯಗಳನ್ನು ಕಡಿಯಲಾಗುತ್ತಿದೆ. ಇದರಿಂದ ಜಗತ್ತಿನ ಜೀವ ಪರಿಸರ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

Sunday, April 8, 2012

ನಮ್ಮಿಂದ ಮರೆಯಾಗುತ್ತಿವೆ ಪಾಂಡಾಗಳು

ಪಾಂಡಾ ಸಂತತಿ ಇಂದು ನಮ್ಮಿಂದ ಮರೆಯಾಗುತ್ತಿದೆ. ಕರಡಿಯ ಸಂತತಿಗೆ ಸೇರಿದ ಇವು ಮಧ್ಯ ಚೀನಾದಲ್ಲಿ ಮಾತ್ರ ಕಂಡು ಬರುತ್ತದೆ. ಇದು ಚೀನಾದ ರಾಷ್ಟ್ರೀಯ ಪ್ರಾಣಿ ಮತ್ತು ಚೀನಿಯರ ಸಂಕೇತ ಕೂಡಾ. 3 ಮಿಲಿಯನ್ ವರ್ಷಗಳಿಂದ ಇವು ವಾಸವಾಗಿವೆ. ಬಿದಿರಿನ ಕಾಡುಗಳಲ್ಲಿ ಮಾತ್ರ ಪಾಂಡಾಗಳು ಕಂಡುಬರುತ್ತವೆ.

ಪಾಂಡಾಗಳು ಶೇ.99ರಷ್ಟು ಬಿದಿರಿನ ಮೇಲೆಯೇ ಅವಲಂಬಿತ. ಬಿದಿರನ್ನು ಬಿಟ್ಟರೆ ಪಾಂಡಾಗಳ ಜೀವನವೇ ಇಲ್ಲ. ಎಲ್ಲೋ ಅಪರೂಪಕ್ಕೆ ಎಂಬಂತೆ ಹುಲ್ಲು, ತರಕಾರಿ, ಮೀನು, ಮತ್ತು ಚಿಕ್ಕಪುಟ್ಟ ಪ್ರಾಣಿಗಳನ್ನು ತಿನ್ನುತ್ತವೆ. ಬೆದಿರಿನಲ್ಲಿ ಪೌಷ್ಠಿಕಾಂಶ ಕಡಿಮೆ. ಹೀಗಾಗಿ ದಿನದ 12 ಗಂಟೆಗಳನ್ನು ಬಿದಿರು ಇನ್ನುವುದರಲ್ಲಿಯೇ ಕಳೆಯುತ್ತವೆ. ಇವುಗಳಿಗೆ ಕುಡಿಯಲು  ನೀರು ಸಹ ಹೆಚ್ಚಿನ ಪ್ರಮಾಣದಲ್ಲಿ ಬೇಕು. ಬಿದಿರಿನ ಕಾಂಡಗಳಲ್ಲಿ ಸಂಗ್ರಹವವಾಗುವ ನೀರನ್ನೇ ಇವು ಕಡಿಯುತ್ತವೆ. ತಿಂದ ಆಹಾರದಲ್ಲಿ 5/1 ರಷ್ಟುನ್ನು ಮಾತ್ರ ಜೀರ್ಣಿಸಿಕೊಳ್ಳುವುದರಿಂದ ಅತೀ ವೇಗವಾಗಿ ಆಹಾರ ತಿನ್ನುತ್ತದೆ. ಪಾಂಡಾಗಳು ಸರಾಗವಾಗಿ ಮರಗಳ್ನು ಏರಿ ಕೊಂಬೆಗಳನ್ನು ತಬ್ಬಿಕೊಂಡು ಮಲಗುತ್ತವೆ. ಮರಗಳೇ ಇವುಗಳ ಮೆನೆ. ಒಂದು ವರ್ಷದ ಪಾಂಡಾ ಮರಿಯೂ ಎತ್ತರದ ಮರವನ್ನು ಏರಬಲ್ಲದು. ಅದೇರೀತಿ ನೀರಿನಲ್ಲಿ ಈಜಬಲ್ಲದು. ಎರಡು ಕಾಲುಗಳ ಮೇಲೆ ನಡೆಯಬಲ್ಲದು.

ನಾಚಿಕೆ ಸ್ವಭಾವ:

ಪಾಂಡಾ ತುಂಬಾ ನಾಚಿಕೆ ಸ್ವಭಾವದವು. ಯಾರಿಗೂ ತೊಂದರೆ ನೀಡದೇ ತನ್ನಪಾಡಿಗೆ ವಾಸಿಸುತ್ತವೆ. ಏಕಾಂತ ಪ್ರದೇಶವನ್ನೇ  ಹೆಚ್ಚಾಗಿ ಇಷ್ಟ ಪಡುತ್ತವೆ. ಹೀಗಾಗಿ ಇವು ಮಾನವನಿಗೆ ಕಾಣಿಸಿಕೊಳ್ಳುವುದು ತುಂಬಾ ಅಪರೂಪ. ಅರಣ್ಯದಲ್ಲಿ ಬಿದಿರಿನ ಹಿಂಡು ಕಾಲಿಯಾದರೆ ಅಥವಾ ಏಕಾಏಕಿ ಸತ್ತು ಹೋದರೆ ಪಾಂಡಾಗಳು ಉಪವಾಸದಿಂದ ಸಾಯುತ್ತವೆ. ಪಾಂಡಾಗಳು ನಿರ್ಧಿಷ್ಟ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುತ್ತವೆ. ಹೀಗಾಗಿ ಪಾಂಡಾಗಳು ಇಂದು ವಾಸಸ್ಥಾನ ಮತ್ತು ಆಹಾರದ ಕೊರತೆ ಎದುರಿಸುತ್ತಿವೆ. 


ಗುರುತಿಸುವುದು ಸುಲಭ
:
ಪಾಂಡಾ ಕುಪ್ಪು ಮತ್ತು ಬಿಳಿ ಬಣ್ಣದ ಪ್ರಾಣಿ. ಅಗಲವಾದ ಬಿಳಿಯ ಮುಖ, ಚಿಕ್ಕದಾದ ಕಪ್ಪು ಕಿವಿ. ಕಣ್ಣಿನ ಸುತ್ತ ಕಪ್ಪು ಕಲೆ. ಚಿಕ್ಕ ಬಾಲ ಇದರ ಗುರುತು. ಇದರ ಬಲಿಷ್ಠ ದವಡೆ, ಅಗಲವಾದ ಹಲ್ಲುಗಳು ಬಿದಿರನ್ನು ಜಗೆಯಲು ಸಹಕಾರಿ. ಪಾಂಡಾಗಳು 2 ರಿಂದ 3 ಅಡಿ ಎತ್ತರ ಮತ್ತು 4 ರಿಂದ 6ಅಡಿ ಉದ್ದವಾಗಿದ್ದು 76 ರಿಂದ 136 ಕೆ.ಜಿ ತೂಕ ಹೊಂದಿರುತ್ತವೆ. ಇವು ಆಹಾರವನ್ನು ಮಾನನಂತೆ ಕೈಯಲ್ಲಿ ಹಿಡಿದು ತಿನ್ನುತ್ತವೆ. ಕೈಯ ಐದು ಬೆರಳಿನಿಂದ ಬಿದಿರನ್ನು ಮುರಿದು ಬಾಯಿಗೆ ಹಾಕಿಕೊಳ್ಳುತ್ತದೆ. ಪಾಂಡಾಗಳು 18 ರಿಂದ 25 ವರ್ಷಗಳವರೆಗೆ ಬದುಕಬಲ್ಲವು. ಪಾಂಡಾಗಳಿಗೆ ಎರಡು ಚರ್ಮಗಳಿರುತ್ತವೆ. ಒಳ ಮೈಮೇಲೆ ದಪ್ಪನೆಯ ಉಣ್ಣೆಯ ಹೊದಿಕೆಯಿದೆ. ಇದು ಪಾಂಡಾಗಳ್ನು ಚಳಿಯಿಂದ ರಕ್ಷಿಸುತ್ತದೆ.

ಹಿಮ ವೆಂದರೆ ಪ್ರೀತಿ.

ಹಿಮವೆಂದರೆ ಪಾಂಡಾಗಳಿಗೆ ತುಂಬಾ ಪ್ರೀತಿ. ಹಿಮವನ್ನು ಕಂಡರೆ ಚಿಕ್ಕಮಕ್ಕಂಳತೆ ಆಟವಾಡುತ್ತವೆ. ಪಾಂಡಾಗಳ ಮರಿಗಳು ಜನಿಸುವಾಗ ತುಂಬಾ ಚಿಕ್ಕದಾಗಿರುತ್ತವೆ. ಆಗ ಅದರ ತೂಕ ಕೇವಲ 120 ಗ್ರಾಂ. ಅದು ತನ್ನ ಮರಿಗಳನ್ನು ಮಾನವರಂತೆ ಕೈಗಳಿಂದ ಎತ್ತಿಕೊಂಡು ಹಾಲುಣಿಸುತ್ತದೆ. 40 ದಿನಗಳ ನಂತರ ಮರಿ ಕಣ್ಣುತೆರೆಯುತ್ತದೆ. ಮೂರನೆ ತಿಂಗಳಿಗೆ ತೆವಳುವುದನ್ನು ಕಲಿತ ಮರಿ 7ನೇ ತಿಂಗಳಿನಲ್ಲಿಯೇ ಓಡುವುದು ಮತ್ತು ಮರ ಹತ್ತುವುದರಲ್ಲಿ ಪರಿಣತಿ ಸಾಧಿಸುತ್ತದೆ. ಪಾಂಡಾದ ಮರಿಗಳು 18 ತಿಂಗಳ ತನಕ ತಾಯಿಯ ಸಂಗಡ ಇರುತ್ತವೆ.

ಸರ್ಕಾರವೇ ರಕ್ಷಿಸುತ್ತಿದೆ.

ಅಚ್ಚಕಪ್ಪು ಬಿಳಿ ಬಣ್ಣದ ಕೇವಲ ಒಂದು ಸಾವಿರ ಪಾಂಡಾಗಗಳು ಮಾತ್ರ ಇಂದು ಬದುಕಿವೆ. ಅಳಿವಿನಂಚಿಗೆ ತಲುಪಿರುವ ಜಗತ್ತಿನ ಅತೀ ವಿರಳ ಪ್ರಾಣಿಗಳ ಪಟ್ಟಿಗೆ ಪಾಂಡಾಗಳೂ ಸೇರಿವೆ. ಪಾಂಡಾಗಳನ್ನು ಅಳಿವಿನಂಚಿನಿಂದ ಕಾಪಾಡಲು ಚೀನಾ ಸರ್ಕಾರ ಪಾಂಡಾಗಳ ಬೇಟೆಯನ್ನು ನಿಷೇಧಿಸಿದೆ ಮತ್ತು ಇವುಗಳನ್ನು ಕಾಪಾಡುವ ಹೊಣೆಯನ್ನು ಹೊತ್ತುಕೊಂಡಿದೆ.   
 


 

Sunday, April 1, 2012

ನೀರಿನಲ್ಲಿ ಈಜುವ ಪಕ್ಷಿ

ಪೆಂಗ್ವಿನ್ ಅಂದಕೂಡಲೇ ನೆನಪಾಗುವುದು ಅಂಟಾರ್ಟಿಕಾ ಖಂಡ. ಹೆಚ್ಚಿನ ಪೆಂಗ್ವಿನ್ ಗಳು ವಾಸಿಸುವುದು ಅಲ್ಲಿಯೇ. ಅದಲ್ಲದೇ ದಕ್ಷಿಣ ಆಫ್ರಿಕಾ, ದಕ್ಷಿಣ ಅಮೆರಿಕ, ಆಸ್ಟ್ರೇಲಿಯ, ನ್ಯುಜಿಲ್ಯಾಂಡಗಳಲ್ಲಿ ಮತ್ತು ದಕ್ಷಿಣ ದ್ರುವದ ಸಣ್ಣ ಪುಟ್ಟ ದ್ವೀಪಗಳಲ್ಲಿ ಇವು ಕಂಡುಬರುತ್ತದೆ. ಆದರೆ ಉತ್ತರಾರ್ಧ ಗೋಳದಲ್ಲಿ ಪೆಂಗ್ವಿನ್ ಗಳ ವಾಸ ಇಲ್ಲ.

 ಪೆಂಗ್ವಿನ್ ಒಂದು ವಿಶಿಷ್ಟ ಜಾತಿಯ ಪಕ್ಷಿ. ಎಲ್ಲಾ ರೀತಿಯ ಪರಿಸರಕ್ಕೂ ಇವು ಹೊಂದಿಕೊಂಡಿವೆ. ಸಮುದ್ರ ಮತ್ತು ಭೂಮಿ ಎರಡರ ಮೇಲೂ ಪೆಂಗ್ವಿನ್ ವಾಸಿಸ ಬಲ್ಲದು. ಹಾರುವ ಸಾಮರ್ಥ್ಯವನ್ನು ಪೆಂಗ್ವಿನ್ಗಳು ಲಕ್ಷಾಂತರ ವರ್ಷಗಳ ಹಿಂದೆಯೆ ಕಳೆದು ಕೊಂಡಿವೆ. ಆದರೆ ಇದರ ರೆಕ್ಕೆಗಳು ಈಜಾಡಲು ನೆರವಾಗುತ್ತಿವೆ. ಈಜುವಾಗ ರೆಕ್ಕೆಗಳು ದೋಣಿಯ ಹುಟ್ಟಿನಂತೆ ಕೆಲಸಮಾಡುತ್ತೆ. ತ್ರಿಕೋಣಾಕೃತಿಯ ಇವುಗಳ ದೇಹ ನೀರಿನಲ್ಲಿ ವೇಗವಾಗಿ ಈಜಲು ಸಹಾಯಕ. ನೀರಿನಲ್ಲಿ ಸರಾಗವಾಗಿ ಈಜಿದಂತೆಯೇ ಪೆಂಗ್ವಿನ್ ಮಾನವನಿಗಿಂತ ವೇಗವಾಗಿ ನಡೆದಾಡಬಲ್ಲವು. ನೀರಿನಲ್ಲಿರುವಾಗ 20 ನಿಮಿಷಗಳ ಕಾಲ ಉಸಿರನ್ನು ಹಿಡಿದಿಟ್ಟುಕೊಳ್ಳಬಲ್ಲವು. ಹಕ್ಕಿಯ ಜಾತಿಯಲ್ಲಿಯೇ ವೇಗವಾಗಿ ಈಜಬಲ್ಲ  ಮತ್ತು ನೀರಿನ ಆಳಕ್ಕೆ ಇಳಿಯಬಲ್ಲ ಪಕ್ಷಿ ಪೆಂಗ್ವಿನ್. ಇವು ಗಂಟೆಗೆ 32 ಕಿ.ಮೀ ವೇಗವಾಗಿ ಈಜುತ್ತವೆ.
 ಪೆಂಗ್ವಿನ್ ಜೀವಿತಾವಧಿಯ ಅರ್ಧ ಭಾಗವನ್ನು ಭೂಮಿಯ ಮೇಲೆ ಕಳೆದದರೆ ಉಳಿದ ಅರ್ಧ ಭಾಗವನ್ನು ಮಹಾಸಾಗರಗಳಲ್ಲಿ ಕಳೆಯುತ್ತವೆ. ನೀರಿನಲ್ಲಿಯ ಜೀವನಕ್ಕೇ ಹೆಚ್ಚಾಗಿ ಹೊಂದಿಕೊಂಡಿರುವ ಇವು ಹಾರಲಾರದ ಪಕ್ಷಿಗಳ  ಗುಂಪಿಗೆ ಸೇರಿದೆ. ಕೆಲವೇ ಕೆಲವು ಜಾತಿಯ ಆದರೆ, ಹೆಚ್ಚಿನ ಪೆಂಗ್ವಿನ್ಗಳು ದಕ್ಷಿಣಾರ್ಧಗೋಳದಲ್ಲಿ ವಾಸಿಸುತ್ತವೆ. ಹಲವಾರು ಜಾತಿಗಳು ಸಮಶೀತೋಷ್ಣ ವಲಯದಲ್ಲಿಯೂ ಕಂಡುಬರುತ್ತದೆ. ಜಗತ್ತಿನಲ್ಲಿ ಪೆಂಗ್ವನ್ ಗಳ  18 ಜಾತಿಗಳಿವೆ.

ಸಾಮ್ರಾಟ ಪೆಂಗ್ವಿನ್:
ಇವು ಅಂಟಾರ್ಟಿಕಾದಲ್ಲಿ ಮಾತ್ರ ಕಂಡುಬರುತ್ತದೆ. ಪೆಂಗ್ವಿನ್ಗಳಲ್ಲಿಯೇ ಅತೀ ದೊಡ್ಡ ಜೀವಂತ ಜಾತಿ ಇದಾಗಿದೆ. ಸಾಮ್ರಾಟ ಪೆಂಗ್ವಿನ್ 1.1 ಮೀಟರ್ (3 ಅಡಿ 7 ಇಂಚು) ನಷ್ಟು ಎತ್ತರ ಮತ್ತು 35 ಕೆ.ಜಿ ಅಥವಾ ಅದಕ್ಕಿಂತ ಹೆಚ್ಚು ಭಾರವಾಗಿರುತ್ತದೆ. ಸರಾಸರಿ 20 ರಿಂದ 40 ವರ್ಷ ಜೀವಿಸಬಲ್ಲದು. ಇದರ ಹೊಟ್ಟೆಯ ಭಾಗ ಬಿಳಿ ಮತ್ತು ಬೆನ್ನಿನ ಭಾಗ ಕಪ್ಪಾಗಿರುತ್ತದೆ. ಇದರ ಕಪ್ಪು ಬಿಳಿ ಪುಕ್ಕಗಳು ಅಂಗಿ ತೊಡಿಸಿದಂತೆ ಭಾಸವಾಗುತ್ತದೆ. ಮೀನು ಇವುಗಳಿಗೆ ಪ್ರೀತಿಯ ಆಹಾರ.

ನೀಲಿ ಬಣ್ಣದ ಪೆಗ್ವಿನ್:
ಪೆಂಗ್ವಿನ್ಗಳಲ್ಲಿಯೇ ಇದು ಅತೀ ಚಿಕ್ಕದು. 40 ಸೆಂಟಿಮೀಟರ್ ನಷ್ಟು ಎತ್ತರವಿದ್ದು, 1 ಕೆ.ಜಿ ತೂಗುತ್ತದೆ. ನ್ಯುಜಿಲ್ಯಾಂಡ್, ಆಸ್ಟ್ರೇಲಿಯದ ಕಡಲ ದಂಡೆಗಳಲ್ಲಿ ಕಂಡುಬರುತ್ತವೆ. 

ಹಳದಿ ಕಣ್ಣಿನ ಪೆಂಗ್ವಿನ್:

 ಇದು ತೀರಾ ಅಪರೂಪ. ಈ ಜಾತಿಯ ಕೇವಲ 5,000 ಪೆಂಗ್ವಿನ್ಗಳು ಮಾತ್ರ ಈಗ ಬದುಕಿವೆ. ನ್ಯುಜಿಲ್ಯಾಂಡ್ ಮತ್ತು ಅಕ್ಕಪಕ್ಕದ ದ್ವೀಪಗಳಲ್ಲಿ ಇವು ವಾಸವಾಗಿವೆ.

ಪರಂಪರೆ ಮುರಿಯಲ್ಲ:
ಇತರ ಪಕ್ಷಿಗಳಂತೆ  ಪೆಂಗ್ವಿನ್ ಸಹ ಗುಂಪಾಗಿ ವಾಸಿಸಲು ಇಷ್ಟಪಡುತ್ತದೆ. ತಮ್ಮದೇ ಆದ ದೊಡ್ಡ ಗುಂಪನ್ನು ಇವು ಹೊಂದಿರುತ್ತವೆ. ಗುಂಪಿನಲ್ಲಿ ಕರಾರುವಕ್ಕಾದ ನಡುವಳಿಕೆಗೆ ಪೆಂಗ್ವಿನ್ ಪ್ರಸಿದ್ಧ. ಒಂದು ಗೂಡಿನಲ್ಲಿ ನೂರಾರು ಪೆಂಗ್ವಿನ್ಗಳ ಗುಂಪು ವಾಸಿಸುತ್ತವೆ. ಸಾವಿರಾರು ವರ್ಷಗಳ ಕಾಲ ಒಂದೇ ಗೂಡಿನಲ್ಲಿಯೇ ಜೀವನ ಸಾಗಿಸುವುದು ಇವುಗಳ ಪರಂಪರೆ. ಗಂಡು ಪೆಂಗ್ವಿನ್ ಮೊಟ್ಟೆಗಳಿಗೆ ಕಾವು ಕೊಡುವ ಸಂದರ್ಭದಲ್ಲಿ ಅದು ಎರಡು ತಿಂಗಳು ಯಾವುದೇ ಅಹಾರ ತಿನ್ನುವುದಿಲ್ಲ. ಆಗ ಹೆಣ್ಣು ಪೆಂಗ್ವಿನ್ ಸಮುದ್ರದಲ್ಲಿರುತ್ತದೆ. ಹೆಣ್ಣು ಪೆಂಗ್ವಿನ್ ಬಂದ ನಂತರ ಮಕ್ಕಳ ಜವಾಬ್ದಾರಿಯನ್ನು ಅವುಗಳಿಗೆ ವಹಿಸಿ ಗಂಡು ಸಮುದ್ರಕ್ಕೆ ಜಾರುತ್ತದೆ. ಉಪವಾಸದಲ್ಲಿ ಕಳೆದು ಕೊಂಡಿದ್ದ ಮೈ ಕೊಬ್ಬಬನ್ನು ಗಂಡು ಪೆಂಗ್ವಿನ್ ಪುನಃ ಪಡೆದುಕೊಳ್ಳುತ್ತದೆ.
 ಮಾನವರ ಕಾಟ:
ಸಮುದ್ರದಲ್ಲಿ ಉಂಟಾಗುತ್ತಿರುವ ಮಾಲಿನ್ಯಗಳು ಪೆಂಗ್ವಿನ್ಗಳ ಜೀವಕ್ಕೆ ಅಪಾಯ ತಂದೊಡ್ಡಿದೆ. ಅನಿಲ ಸೋರಿಕೆ, ತಾಪಮಾನ ಹೆಚ್ಚಳ, ಅಕ್ರಮ ಮೀನುಗಾರಿಕೆ, ಆಹಾರ ಕೊರತೆ ಮುಂತಾದವುಗಳಿಂದ ಪೆಂಗ್ವಿನ್ಗಳಿಗೆ ಸಂಕಷ್ಟ ಎದುರಾಗಿದೆ.