ಜೀವನಯಾನ

Sunday, January 29, 2017

ಸೈಬೀರಿಯಾ!

  •  ಭೂಮಿಯ ಮೇಲಿನ ಅತಿ ಭೀಕರ ಪ್ರದೇಶ

ಮೈಕೊರೆಯುವ ಚಳಿ, ಎಷ್ಟು ಸಾಗಿದರೂ ಮುಗಿಯದ  ವಿಶಾಲವಾದ ಬಯಲು, ಕಣ್ಣು  ಹಾಯಿಸಿದಷ್ಟು ಹಿಮ. ಪ್ರಪಂಚದಲ್ಲಿ ಎಲ್ಲಿಯೂ ಇಲ್ಲದ ಅತಿ ಕಠಿಣ ವಾತಾವರಣ. ಅದೇ ಸೈಬೀರಿಯಾ. ವಿಶ್ವದ ಅತ್ಯಂತ ದೊಡ್ಡ ದೇಶವೆನಿಸಿರುವ ರಷ್ಯಾದ ಮುಕ್ಕಾಲು ಭಾಗವನ್ನು ಸೈಬೀರಿಯಾ ಆವರಿಸಿಕೊಂಡಿದೆ. ಒಂದು ವೇಳೆ ಸೈಬೀರಿಯಾ ಸ್ವತಂತ್ರ ರಾಷ್ಟ್ರವಾದರೆ ವಿಶ್ವದ  ಅತಿದೊಡ್ಡ ದೇಶವೆನಿಸಿಕೊಳ್ಳಲಿದೆ. 


ಬ್ರಿಟನ್ ಗಿಂತ  50 ಪಟ್ಟು ದೊಡ್ಡದು!
ದಕ್ಷಿಣದಲ್ಲಿ ಆರ್ಕಟಿಕ್ ಸಾಗರದಿಂದ ಉತ್ತರ ಕೇಂದ್ರೀಯ ಕಜಕಸ್ತಾನ್ ಪರ್ವತದ ವರೆಗೆ, ಮಂಗೋಲಿಯಾ ಹಾಗೂ ಚೀನಾದ ರಾಷ್ಟ್ರೀಯ ಗಡಿ ಪ್ರದೇಶದ ವರೆಗೂ ಹರಡಿದೆ. ಸೈಬೀರಿಯಾದ ಒಟ್ಟು ವಿಸ್ತೀರ್ಣ 13.1 ದಶಲಕ್ಷ ಚದರ್ ಕಿಲೋ ಮೀಟರ್. ಸೈಬೀರಿಯಾ ಜಗತ್ತಿನ ಎರಡನೇ ಅತಿದೊಡ್ಡ ದೇಶವೆನಿಸಿರುವ ಕೆನಡಾಕ್ಕಿಂತಲೂ ದೊಡ್ಡದಾಗಿದೆ.
ಸೈಬೀರಿಯಾ ಎಂಬ ಪದಕ್ಕೆ ನಾನಾ ಅರ್ಥಗಳಿವೆ. ಸೈಬೀರಿಯಾ ಎಂಬ ಪದವು ಸಿಬರ್ ಜನರೊಡನೆ ಕೂಡಿಕೊಂಡಿದೆ ಎಂದು ಊಹಿಸಲಾಗಿದೆ. ಸಿಬರ್ ಅಂದರೆ ಸ್ಲೀಪಿಂಗ್ ಲ್ಯಾಂಡ್ ಎಂಬ ಅರ್ಥವಿದೆ. ಗ್ರೇಟ್ ಬ್ರಿಟನ್ಗಿಂತ 50 ಪಟ್ಟು ದೊಡ್ಡದಾಗಿದೆ ಸೈಬೀರಿಯಾ. ಆದರೆ, ಜನಸಖ್ಯೆ ಅದರ ಅರ್ಧದಷ್ಟೂ ಇಲ್ಲ. ಸುಮಾರು 2 ಕೋಟಿ ಜನಸಂಖ್ಯೆ ಇದ್ದಿರಬಹುದೆಂದು ಅಂದಾಜಿಸಲಾಗಿದೆ.

 ಬೈಕಾಲ್ ಸರೋವರ
ಸೈಬೀರಿಯಾದಲ್ಲಿರುವ ವಿಶೇಷತೆಗಳ ಪೈಕಿ ಬೈಕಾಲ್ ಸರೋವರವೂ ಒಂದು. ಇದು ಜಗತ್ತಿನ ಅತಿ ಹಳೆಯ ಮತ್ತು ಅತಿ ಆಳವಾದ ಸರೋವರ ಎನಿಸಿಕೊಂಡಿದೆ. ಅಲ್ಲದೇ ಅತ್ಯಂತ ಶುದ್ಧ ನೀರಿನ ಸರೋವರ. ಈ  ಸರೋವರ ಗಾತ್ರದಲ್ಲಿ ನೆದರ್ ಲ್ಯಾಂಡ್ ಅಥವಾ ಬೆಲ್ಜಿಯಂಗಿಂತಲೂ ದೊಡ್ಡದಾಗಿದೆ. ಜಗತ್ತಿನ ಶೇ.20ರಷ್ಟು ತಾಜಾ ನೀರು ಬೈಕಾಲ್ ಸರೋವರದಲ್ಲಿ ಲಭ್ಯವಿದೆ.

ಗ್ರೇಟ್ ವಾಸ್ಯುಗನ್ ಜೌಗು ಪ್ರದೇಶ
ಸೈಬೀರಿಯಾ ಜಗತ್ತಿನ ಅತಿದೊಡ್ಡ ಜೌಗು ಪ್ರದೇಶವೆನಿಸಿರುವ ವಾಸ್ಯುಗನ್ ಜೌಗು ಪ್ರದೇಶವನ್ನು ಒಳಗೊಂಡಿದೆ. ಇದು ಸ್ವಿಜರ್ ಲ್ಯಾಂಡ್ ಗಿಂತಲೂ ದೊಡ್ಡದಾಗಿದೆ. ಈ ಜೌಗು ಪ್ರದೇಶದಲ್ಲಿ 800ಕ್ಕೂ ಅಧಿಕ ನದಿಗಳಿವೆ. ಇದು 55 ಸಾವಿರ ಚದರ್ ಕಿ.ಮೀ.ಯಷ್ಟು ವಿಶಾಲವಾದ ಪ್ರದೇಶಕ್ಕೆ ಆವರಿಸಿಕೊಂಡಿದೆ. ಇಲ್ಲಿ ಅತಿ ಹೆಚ್ಚಿನ ಸಸ್ಯದ ಇದ್ದಿಲಿನ ಸಂಗ್ರಹವಿದೆ.

ದೊಡ್ಡ ದೊಡ್ಡ ನದಿಗಳು

ಸೈಬೀರಿಯಾದ ಗಾತ್ರಕ್ಕೆ ತಕ್ಕಂತೆ ಅಲ್ಲಿನ ನದಿಗಳೂ ದೊಡ್ಡದಾಗಿವೆ. ವಿಶ್ವದ ಅತಿದೊಡ್ಡ 10 ನದಿಗಳ ಪೈಕಿ ನಾಲ್ಕು ನದಿಗಳು ಸೈಬೀರಿಯಾದಲ್ಲಿ ಹರಿಯುತ್ತವೆ. ಲೀನಾ ನದಿ ಜಗತ್ತಿನ ನಾಲ್ಕನೇ ಅತಿದೊಡ್ಡ ನದಿ ಎನಿಸಿಕೊಂಡಿದೆ.

ಜಗತ್ತಿನ ಅತಿ ತಣ್ಣನೆಯ ನಗರ
ಇದು ಜಗತ್ತಿನ ಅತಿ ಶೀತ ನಗರ. ಜನವರಿಯಲ್ಲಿ ಈ ನಗರದ ಉಷ್ಣಾಂಶ -40 ಡಿಗ್ರಿ ಸೆಲ್ಸಿಯಸ್ಗೆ ಇಳಿಯುತ್ತದೆ. ಸೈಬೀರಿಯಾದ ಹವಾಮಾ ಇದ್ದಕ್ಕಿದ್ದಂತೆ ಬದಲಾಗುತ್ತದೆ. ಇಲ್ಲಿನ ವಾರ್ಷಿಕ ಉಷ್ಣಾಂಶವೇ 0.5 ಡಿಗ್ರಿ. ಇನ್ನು ಉತ್ತರ ಭಾಗದಲ್ಲಂತೂ ವರ್ಷಪೂರ್ತಿ ಚಳಿಗಾಲ. ಹೀಗಾಗಿ ಜನರು ದಕ್ಷಿಣದ ಭಾಗದಲ್ಲಿ ವಾಸಿಸುತ್ತಾರೆ. ಮಾಸ್ಕೋದಿಂದ  ವ್ಲಾಡಿವೋಸ್ಟಾಕ್ ವರೆಗೆ ರೈಲು ಮಾರ್ಗವಿದ್ದು, ಈ ದಾರಿಯನ್ನು ಕ್ರಮಿಸಲು ರೈಲು ಒಂದು ವಾರ ತೆಗೆದುಕೊಳ್ಳುತ್ತದೆ.

ಸೈಬೀರಿಯನ್ ಹಸ್ಕಿ ನಾಯಿ
ಸೈಬೀರಿಯಾದಲ್ಲಿ ಹಸ್ಕಿ ತಳಿಯ ನಾಯಿಗಳು ತುಂಬಾ ಫೇಮಸ್. ರಷ್ಯಾದ ಉತ್ತರ ಭಾಗದಲ್ಲಿ ಈ ನಾಯಿಗಳ ಸಂತತಿ ಕಂಡು ಬರುತ್ತವೆ. ಇಂತಹ ಚಳಿಯ ವಾತಾವರಣದಲ್ಲೂ ಇವು ಬದುಕಬಲ್ಲವು.

ಪ್ರಸಿದ್ಧ ಪ್ರವಾಸಿ ತಾಣ
ಇಂದು ಸೈಬೀರಿಯಾ ವಿಶ್ವದ ಪ್ರಸಿದ್ಧ ಪ್ರವಾಸಿ ತಾಣವಾಗಿ ರೂಪಾಂತರಗೊಂಡಿದೆ. ಇಲ್ಲಿ ನೈಸರ್ಗಿಕ ಸೌಂದರ್ಯವನ್ನು ಅನುಭವಿಸಲು ಸಾವಿರಾರು ಪ್ರವಾಸಿಗರು ಸೈಬೀರಿಯಾಕ್ಕೆ ಬರುತ್ತಾರೆ.


Saturday, January 28, 2017

ಕೆಂಪು ಕಡಲ ತೀರ!

ಸಮುದ್ರ ತೀರ ಎಂದಾಕ್ಷಣ ವಿಶಾಲವಾಗಿ ಹರಡಿರುವ ಮರಳಿನ ರಾಶಿಯೇ ಕಣ್ಣಮುಂದೆ ಬರುತ್ತದೆ. ಆದರೆ, ಇಲ್ಲೊಂದು ಕಡಲ ತೀರದಲ್ಲಿ ಮರಳಿನ ಬದಲು ಕೆಂಪು ಬಣ್ಣದ ಸಮುದ್ರ ಕಳೆಗಳು ಆವರಿಸಿಕೊಂಡಿವೆ. ಇದರಿಂದಾಗಿ ಸಮುದ್ರ ತೀರವೆಲ್ಲಾ ಕೆಂಪು ಬಣ್ಣದಿಂದ ಕಂಗೊಳಿಸುತ್ತದೆ. ಹೀಗಾಗಿ ಇದು ರೆಡ್ ಬೀಚ್ ಎಂದೇ ಪ್ರಸಿದ್ಧವಾಗಿದೆ. ಇಂಥದ್ದೊಂದು ಕಡಲ ತೀರ ಇರುವುದು ಚೀನಾದ ಲಿಯನಿಂಗ್ ಪ್ರಾಂತ್ಯದ ಪಂಜಿನ್ನಲ್ಲಿ. ಲಿಯಾವೋ ನದಿ ಮುಖಜ ಭೂಮಿಯಲ್ಲಿ ರೆಡ್ ಬೀಚ್ ಹರಡಿಕೊಂಡಿದೆ. 

 
 ಕೆಂಪು ಕಡಲ ತೀರ ನೋಡೋದೇ ಚಂದ:
ಪಂಜಿನ್ ಕಡಲ ತೀರದ ಲವಣಯುಕ್ತ ಮಣ್ಣಿನಲ್ಲಿ ಸುಯೇದಾ ಸಾಲ್ಸಾ ಎಂಬ ಜಾತಿಯ ಸಸ್ಯವೊಂದು ಬೆಳೆಯುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಈ ಸಸ್ಯ ಬೆಳೆಯಲು ಆರಂಭವಾಗುತ್ತದೆ. ಬೇಸಿಗೆ ವೇಳೆಯಲ್ಲಿ ಅದು ನೋಡಲು ಹಸಿರಾಗಿಯೇ ಇರುತ್ತದೆ. ಬಳಿಕ ಅದು ಕೆಂಪು ಬಣ್ಣಕ್ಕೆ ತಿರುಗುತ್ತದೆ. ರೆಡ್ ಬೀಚ್ 100 ಚದರ ಕಿ.ಮೀ.ಗೆ ವ್ಯಾಪಿಸಿಕೊಂಡಿದೆ. ಇದು ವಿಶ್ವದ ಅತಿ ವಿಶಾಲವಾದ ತೇವ ಪ್ರದೇಶ ಮತ್ತು ಕೆಂಪು ಜವಗುಭೂಮಿ ಎನಿಸಿಕೊಂಡಿದೆ. ಇಲ್ಲಿ ಎತ್ತ ಕಣ್ಣು  ಹಾಯಿಸಿದರೂ ಬರೀ ಕೆಂಪು ಬಣ್ಣವೇ ಕಾಣಸಿಗುತ್ತದೆ. ಆದರೆ, ಪ್ರವಾಸಿಗರು ಇಲ್ಲಿ ಎಲ್ಲೆಂದರಲ್ಲಿ ಓಡಾಡುವಂತಿಲ್ಲ. ಒಂದು ಸಣ್ಣ ಪ್ರದೇಶದಲ್ಲಿ ಮಾತ್ರ ಪ್ರವಾಸಿಗರಿಗೆ ಅವಕಾಶ  ಕಲ್ಪಿಸಲಾಗಿದೆ.  ಮರದ ಅಟ್ಟಣಿಗೆಯ ಮೇಲೆ ನಿಂತು ಕೆಂಪು ಕಡಲ ತೀರವನ್ನು ನೋಡುವುದೇ ಸೊಗಸು. 1988ರಲ್ಲಿ ಈ ಕಡಲ ತೀರವನ್ನು ರಾಷ್ಟ್ರೀಯ ನೈಸರ್ಗಿಕ ಮೀಸಲು ಪ್ರದೇಶ ಎಂದು ಘೋಷಿಸಲಾಗಿದೆ. ಚೀನಾ ಸಕರ್ಾರವೇ ಈ ಕಡಲ ತೀರಕ್ಕೆ ರಕ್ಷಣೆ ಒದಗಿಸುತ್ತಿದೆ.

ಪಕ್ಷಿ ಸಂಕುಲಗಳ ತವರು
ರೆಡ್ ಬೀಚ್ 260 ಬಗೆಯ ಪಕ್ಷಿಗಳಿಗೆ ತವರು ಮನೆಯಾಗಿದೆ. ಪಕ್ಷಿಗಳ ಸ್ವರ್ಗ ಎಂದೇ ಕರೆಯಲಾಗುತ್ತದೆ. ಕೆಂಪು ತಲೆಯ ಕೊಕ್ಕರೆಗಳು ಇಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಅಳಿವಿನ ಅಂಚಿನಲ್ಲಿರುವ ಹಲವಾರು ವಲಸೆ ಪಕ್ಷಿಗಳಿಗೂ ಆಶ್ರಯ ತಾಣವಾಗಿದೆ. ಅಷ್ಟೇ ಅಲ್ಲ 399 ಬಗೆಯ ವನ್ಯ ಜೀವಿಗಳು ಇಲ್ಲಿ ವಾಸವಾಗಿವೆ. ಫೋಟೋಗ್ರಫಿಗೂ ಇದೊಂದು ನೆಚ್ಚಿನ ತಾಣ.

ವಿಶೇಷತೆ ಏನು?

ಕಡಲ ತೀರದಲ್ಲಿ ಬೆಳೆಯುವ ಸುಯೇದಾ ಸಾಲ್ಸಾ ಸಸ್ಯದಿಂದ ರೆಡ್ ಬೀಚ್ ಎಂಬ ಹೆಸರು ಬಂದಿದೆ. ಈ ಸಸ್ಯ ಬೆಳೆಯುವಾಗ ಹಸಿರು ಬಣ್ಣದಲ್ಲಿದ್ದು, ಬಳಿಕ ಕಿತ್ತಳೆ ಬಣ್ಣಕ್ಕೆ ತಿರುಗುತ್ತದೆ. ನಂತರ ಗುಲಾಬಿ ಬಣ್ಣಕ್ಕೆ ತಿರುಗಿ ಕೊನೆಯಲ್ಲಿ ಕೆಂಪು ಬಣ್ಣದಲ್ಲಿ ಕಂಗೊಳಿಸುತ್ತದೆ. ಇಲ್ಲಿ ಹಲವು  ಬಗೆಯ ಜೊಂಡು ಹುಲ್ಲುಗಳು ಬೆಳೆಯುತ್ತವೆ. ಅದನ್ನು ಪೇಪರ್ ತಯಾರಿಸಲು ಬಳಸಲಾಗುತ್ತದೆ. ಈ ಕಾರಣಕ್ಕಾಗಿ ಪಂಜಿನ್ ಬೀಚ್ನ ಹೆಚ್ಚಿನ ಪ್ರದೇಶದಲ್ಲಿ ಜೊಂಡು ಹುಲ್ಲಿನ ಕೃಷಿಯನ್ನು ಮಾಡಲಾಗುತ್ತದೆ.

ಈ ನದಿಗೆ ಐದು ಬಣ್ಣಗಳು!

ನೀರಿಗೆ ಬಣ್ಣವಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ. ಆದರೂ ಇಲ್ಲೊಂದು ನದಿ ಕಾಮನ ಬಿಲ್ಲಿನಂತೆ ಹಲವು ಬಣ್ಣಗಳಿಂದ ಕಂಗೊಳಿಸುತ್ತದೆ. ಈ ನದಿಯ ಸೌಂದರ್ಯಕ್ಕೆ ಎಂಥವರಾದರೂ ಮನಸೋಲಲೇ ಬೇಕು. ಸ್ವರ್ಗದಿಂದಲೇ ಇಳಿದು ಬಂದಿದೆಯೇನೋ ಎಂಬತೆ ಭಾಸವಾಗುತ್ತದೆ. ಅಂದಹಾಗೆ ಈ ನದಿಯ ಹೆಸರು ಕಾನೋ ಕ್ರಿಸ್ಟಲ್ಸ್. ಇದು ಕೊಲಂಬಿಯಾ ದೇಶದ ಒಂದು ನದಿ. ಸೆರ್ರಾನಿಯಾ ಡಿ ಲಾ ಮಾಕಾರೆನಿಯಾ ಎಂಬ ಪ್ರಾಂತ್ಯದಲ್ಲಿ ಹರಿಯುತ್ತದೆ. ಇದನ್ನು ಐದು ಬಣ್ಣಗಳ ನದಿ ಎಂದೇ ಕರೆಯಲಾಗುತ್ತದೆ. ದ್ರವ ಕಾಮನಬಿಲ್ಲು ಅಂತಲೂ ಕರೆಸಿಕೊಂಡಿದೆ.  ಈ ಕಾರಣಕ್ಕಾಗಿ  ಕಾನೋ ಕ್ರಿಸ್ಟಲ್ಸ್ ಜಗತ್ತಿನ ಅತ್ಯಂತ ಸುಂದರ ನದಿ ಎನಿಸಿಕೊಂಡಿದೆ.


ಐದು ಬಣ್ಣಗಳಿರಲು ಏನು ಕಾರಣ?
ಈ ನದಿ ಜೂನ್ನಿಂದ ನವೆಂಬರ್ ತಿಂಗಳ ಅವಧಿಯಲ್ಲಿ ವರ್ಣರಂಚಿತವಾಗಿ ಕಂಗೊಳಿಸುತ್ತದೆ.  ಏಕೆಂದರೆ, ಈ ನದಿಯ ತಳ ಕಲ್ಲು ಬಂಡೆಗಳಿಂದ ಆವೃತ್ತವಾಗಿದೆ. ಅವುಗಳ ಮೇಲೆ ಬೆಳೆಯುವ ಮೆಕಾರೆನಿಯಾ ಕ್ಲಾವಿಗೆರಾ ಎಂಬ ಸಸ್ಯದಿಂದಾಗಿ ನದಿಯ ನೀರು ಕೂಡ ಕೆಂಪು ಬಣ್ಣದಿಂದ ಕಾಣಿಸುತ್ತದೆ. ಅಲ್ಲದೆ, ನದಿಯ ನೀರು ಹಳದಿ, ಹಸಿರು, ನೀಲಿ, ಕಪ್ಪು ಬಣ್ಣಗಳಿಂದ ಕೂಡಿದೆಯೇನೋ ಎಂಬತೆ ತೋರುತ್ತದೆ. ಇದರ ಹಿಂದೆಯೂ ಒಂದು ವೈಜ್ಞಾನಿಕ ಪ್ರಕ್ರಿಯೆ ಇದೆ. ಜೂನ್ ಬಳಿಕ ನದಿಯಲ್ಲಿ ನೀರು ಕಡಿಮೆ ಆಗುವುದರಿಂದ ಸೂರ್ಯನ ಕಿರಣ ತಳದಲ್ಲಿರುವ ಕಲ್ಲು ಬಂಡೆಗಳನ್ನು ಬಿಸಿಯಾಗಿಸುತ್ತದೆ. ಹೀಗಾಗಿ ಬಂಡೆಗಳ ಮೇಲೆ ಬೆಳೆದ ಪಾಚಿಗಿಡಗಳು ಹೂವು ಅರಳಿಸುತ್ತವೆ.  ಮೆಕಾರೆನಿಯಾ ಕ್ಲಾವಿಗೆರಾ ಸಸ್ಯದ ಎಲೆಗಳು ಕೆಂಪು ಬಣ್ಣಕ್ಕೆ ತಿರುಗುತ್ತವೆ. ಅವುಗಳ ಜತೆಗೆ ಬಂಡೆಗಳ ಮೇಲೆ ಬೆಳೆದ ಹಸಿರು ಪಾಚಿಗಳು, ತಳದಲ್ಲಿರುವ ಹಳದಿ ಬಣ್ಣದ ಮರಳು ದಿಣ್ಣೆಗಳು, ಬಿಸಿಲಿನಿಂದ ನೀಲಿ ಬಣ್ಣದಿಂದ ಕಾಣುವ ನೀರು, ನದಿಯಲ್ಲಿ ಬೆಳೆದಿರುವ ಗಿಡಗಂಟಿಗಳ ನೆರಳು  ಸೇರಿಕೊಂಡು ನದಿ ಬಣ್ಣ ಬಣ್ಣದಿಂದ   ಕಾಣುವಂತೆ ಮಾಡುತ್ತದೆ. ದೂರದಿಂದ ನೋಡಿದರೆ, ಕಾಮನ ಬಿಲ್ಲು ನೆಲದ ಮೇಲೆ ಬಿದ್ದುಕೊಂಡಂತೆ ಭಾಸವಾಗುತ್ತದೆ. ನವೆಂಬರ್ ತಿಂಗಳು ಮುಗಿಯುತ್ತಿದ್ದಂತೆ ನದಿಯಲ್ಲಿ ನೀರು ಖಾಲಿಯಾಗಿ ಪಾಚಿಗಳು ಒಣಗಲು ಆರಂಭಿಸುತ್ತದೆ. ಬಳಿಕ ಪಾಚಿಗಳು ನೇರಳೆ ಬಣ್ಣಕ್ಕೆ ತಿರುತ್ತದೆ. ಈ ನದಿ ಒಟ್ಟು 62 ಮೈಲಿ ಉದ್ದವಿದೆ.

ಬೇಸಿಗೆಯಲ್ಲಿ ಬಣ್ಣ ಕಳೆದುಕೊಳ್ಳುತ್ತದೆ
ಇವಿಷ್ಟೇ ಈ ನದಿಯ ವಿಶೇಷತೆಗಳಲ್ಲ. ಈ ಬೇಸಿಗೆಯಲ್ಲಿ ಈ ನದಿ ರಭಸವಾಗಿ ಹರಿಯುತ್ತದೆ. ಅಲ್ಲಲ್ಲಿ ಜಲಪಾತಗಳಿಂದ ಧುಮ್ಮಿಕ್ಕುತ್ತದೆ. ನದಿಯ ತಳ ಸಂಪೂರ್ಣವಾಗಿ ಕಲ್ಲು ಬಂಡೆಗಳಿಂದ ಆವೃತ್ತವಾಗಿರುವುದರಿಂದ ನೈಸರ್ಗಿಕ ಈಜುಕೊಳಗಳನ್ನು ನಿರ್ಮಿಸಿಕೊಟ್ಟಿದೆ. ಕೆಲೆವಡೆ ಈ ನದಿ ಬಹಳಷ್ಟು ಆಳವಾಗಿದೆ. ಅಲ್ಲಿಗೆ ಸೂರ್ಯನ ಬೆಳಕು ತಲುಪುವುದೇ ಇಲ್ಲ. ಹೀಗಾಗಿ ಆ ಪ್ರದೇಶ ಕಪ್ಪು ಕಲೆಯಂತೆ ಕಾಣುತ್ತದೆ. ಆದರೆ, ಬೇಸಿಗೆಯ ಅಂತ್ಯದ ವೇಳೆಗೆ ಈ ನದಿ ತನ್ನೆಲ್ಲಾ ಬಣ್ಣವನ್ನು ಕಳೆದುಕೊಂಡು ವರ್ಣ ರಹಿತವಾಗಿ ಕಾಣಿಸುತ್ತದೆ.

ಜಲಚರಗಳೇ ಇಲ್ಲ
ಇಷ್ಟೊಂದು ಆಕರ್ಷಕವಾಗಿದ್ದರೂ, ನದಿಯಲ್ಲಿ ಒಂದೇ  ಒಂದು ಜಲಚರಗಳು ಕಾಣಸಿಗುವುದಿಲಲ್ಲ. ಇದಕ್ಕೆ  ಕಾರಣ ನದಿಯ ತಳ ಕಲ್ಲಿನಿಂದ ಆವೃತ್ತವಾಗಿರುವುದು. ಕಲ್ಲು ಬಂಡೆ ಬಿಸಿಲಿಗೆ ಕಾದು ನೀರನ್ನು ಬಿಸಿ ಮಾಡುವುದರಿಂದ ಮತ್ತು ಪೌಷ್ಟಿಕಾಂಶ ಕೊರತೆಯಿಂದಾಗಿ ಜಲಚರಗಳು ನೀರಿನಲ್ಲಿ ಬದುಕಲು ಸಾಧ್ಯವಾಗುವುದಿಲ್ಲ.

ದುರ್ಗಮ ಹಾದಿ

ಕಾನೋ ಕ್ರಿಸ್ಟಲ್ಸ್ ನದಿ ದುರ್ಗಮ ಪ್ರದೇಶದಲ್ಲಿದೆ. ಹೀಗಾಗಿ ಈ ನದಿಯ ವೀಕ್ಷಣೆಗೆ ತೆರಳುವುದು ಅಷ್ಟು ಸುಲಭವಲ್ಲ. ಹೋಗುವುದಕ್ಕೆ ಸರಿಯಾದ ರಸ್ತೆಗಳಿಲ್ಲ. ಸಾಹಸಿ ಪ್ರವಾಸಿಗರು ಹತ್ತಿರದ ಲಾ ಮಾಕಾರೆನಿಯಾ ಪಟ್ಟಣಕ್ಕೆ ತೆರಳಿ ಅಲ್ಲಿಂದ ಸೆರ್ರಾನಿಯಾ ಡಿ ಲಾ ಮಾಕಾರೆನಿಯಾದಲ್ಲಿರುವ ಈ ನದಿಗೆ  ಚಾರಣ ಕೈಗೊಳ್ಳಬಹುದು.




ಕಾಮನಬಿಲ್ಲಿನ ಬೆಟ್ಟಗಳು!

ಆಕಾಶದಲ್ಲಿ ಯಾವಾಗಲೋ ಒಮ್ಮೆ ಕಾಮನಬಿಲ್ಲು ಉಂಟಾಗುವುದನ್ನು ನೋಡಿರುತ್ತೇವೆ. ಆದರೆ, ಚೀನಾದಲ್ಲಿ ಬೆಟ್ಟೆಗಳೇ ಕಾಮನ ಬಿಲ್ಲಿನ ಬಣ್ಣಗಳನ್ನು ಹೊದ್ದುನಿಂತಿವೆ. ಬೆಟ್ಟಕ್ಕೆ ಬಣ್ಣಗಳನ್ನು ಬಳಿದಂತೆ ತೋರುವ ಅವುಗಳನ್ನು ನೋಡುವುದೇ ಚಂದ. ಚೀನಾದ ಝಾಂಗ್ಯೆ ದಂಕ್ಸಿಯಾ ಲ್ಯಾಂಡ್ ಫಾರ್ಮ್ ಜಿಯೊಲಾಜಿಕಲ್ ಪಾರ್ಕ್ ತನ್ನ ವಿಶಿಷ್ಟ ಭೂ ರಚನೆಯಿಂದ ಎಲ್ಲರನ್ನು ಆಕರ್ಷಿಸುತ್ತಿದೆ. 



ಈ ಗುಡ್ಡಗಳು ರಚನೆಯಾಗಿದ್ದು ಹೇಗೆ?
ಲಕ್ಷಾಂತರ ವರ್ಷಗಳಿಂದ ಕೆಂಪು ಮರಳುಗಲ್ಲು ಸೇರಿದಂತೆ ವಿವಿಧ ಬಗೆಯ ಕಲ್ಲುಗಳು ಮತ್ತು ಖನಿಜಗಳು ಒಂದರ ಮೇಲೆ ಒಂದರಂತೆ ರಾಶಿ ಬಿದ್ದಿದ್ದವು. ಆದರೆ, 40- 50 ದಶಲಕ್ಷ ವರ್ಷಗಳ ಹಿಂದೆ ಭೂಪದರಗಳ ಹೊಯ್ದಾಟದಿಂದಾಗಿ ಚೀನಾದ ಗನ್ಸು ಪ್ರಾಂತ್ಯದಲ್ಲಿ ಖನಿಜಗಳ ಸಣ್ಣಸಣ್ಣ ಗುಡ್ಡಗಳು ನಿರ್ಮಾಣಗೊಂಡಿದ್ದವು. ಕಾಲ ಕ್ರಮೇಣ ಮಳೆ ಮತ್ತು ಗಾಳಿಗೆ ಕೆಂಪು ಮರಳುಗಲ್ಲುಗಳ ಸವೆತದಿಂದ ಅವುಗಳ ಮೇಲೆ ಪದರಗಳು ಸೃಷ್ಟಿಯಾದವು. ಆ ಪದರಗಳು ಒಂದುದೊಂದು ಬಣ್ಣಗಳನ್ನು ಹೊಂದಿರುವುದರಿಂದ ಗುಡ್ಡ ಕಾಮನಬಿಲ್ಲಿನ ಬಣ್ಣಗಳನ್ನು ಹೊದ್ದುನಿಂತಂತೆ ಭಾಸವಾಗುತ್ತದೆ.

ಚೀನಾದ ಸುಂದರ ತಾಣ
ಝಾಂಗ್ಯೆ ದಂಕ್ಸಿಯಾ ಲ್ಯಾಂಡ್ ಫಾರ್ಮ್ ಜಿಯೊಲಾಜಿಕಲ್ ಪಾರ್ಕ್ 150 ಚದರ ಕಿ.ಮೀ. ಪ್ರದೇಶಕ್ಕೆ ವ್ಯಾಪಿಸಿದೆ.     ಚೀನಾದಲ್ಲಿರುವ ಅತ್ಯಂತ ಸುಂದರ ಭೂರಚನೆ ಇದಾಗಿದೆ. ಆದರೆ, 1920ರ ವರೆಗೂ ಹೊರಜಗತ್ತಿನ ಈ ಗುಡ್ಡಗಳ ಬಗ್ಗೆ ಅರಿವೇ ಇರಲಿಲ್ಲ. ಆ ಬಳಿಕ ಚೀನಾದ ಪುರಾತತ್ವ ಶಾಸ್ತ್ರಜ್ಞರು ದಂಕ್ಸಿಯಾ ಬೆಟ್ಟಗಳನ್ನು ಗುರುತಿಸಿದ್ದರು. 2009ರಲ್ಲಿ ಇದನ್ನು ಯುನೆಸ್ಕೋದ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಚೀನಾದ ಪ್ರಸಿದ್ಧ ಪ್ರವಾಸಿ ತಾಣಗಳ ಪೈಕಿ ಮೊದಲ ಸ್ಥಾನ ಪಡೆದುಕೊಂಡಿದೆ.
ಇದೇ ರೀತಿ ಉತ್ತರ ಅಮೆರಿಕ, ಬ್ರಿಟಿಷ್ ಕೊಲಂಬಿಯಾದ ರೇಂಬೋ ರೇಂಜ್ಗಳಲ್ಲಿರುವ ಬೆಟ್ಟಗಳು ಕೂಡ ವಿವಿಧ ಬಣ್ಣಗಳಿಂದ ಕಂಗೊಳಿಸುತ್ತವೆ. ಆದರೆ, ಚಿತ್ರ ಬಿಡಿಸಿಟ್ಟಂತೆ ಕಾಣುವ ಬಣ್ಣ ಬಣ್ಣದ ಪಟ್ಟಿಗಳು ಎಲ್ಲಿಯೂ ಕಂಡುಬರುವುದಿಲ್ಲ. ಬಿಸಿಲಿನ ವೇಳೆಯಲ್ಲಿ ಗುಡ್ಡದ ಬಣ್ಣಗಳು ಇನ್ನಷ್ಟು ಸ್ಪಷ್ಟವಾಗಿ ಗೋಚರಿಸುತ್ತವೆ.

ಕಾಮನಬಿಲ್ಲಿನ ಬಣ್ಣ
ಕಾಮನ ಬಿಲ್ಲಿನ ಬಣ್ಣಗಳಾದ ಕೆಂಪು, ನೀಲಿ, ಹಳದಿ ಮತ್ತು ಹಸಿರು ಬಣ್ಣದ ಪಟ್ಟಿಗಳು ಗುಡ್ಡಗಳನ್ನು ಆಕರ್ಷಕವಾಗಿಸಿವೆ.
ಮುಂಜಾನೆ ಅಥವಾ ಸೂಯರ್ಾಸ್ತದ ವೇಳೆ ಈ ಗುಡ್ಡಗಳು ನಯನಮನೋಹರವಾಗಿ ಗೋಚರಿಸುತ್ತವೆ.


ಕಣ್ಣೆದುರೇ ಮಾಯವಾಗುವ ಸಮುದ್ರ!

ಸಮುದ್ರ ಅಂದರೆ ಅಗಾಧ. ಕಣ್ಣು ಹಾಯಿಸಿದಷ್ಟು ಜಲರಾಶಿ. ಯಾವ ಕಾಲಕ್ಕೂ ಸಮುದ್ರದ ನೀರು ಖಾಲಿಯಾಯಿತು ಎಂಬ ಮಾತೇ ಇಲ್ಲ. ಅಂಥ ಸಮುದ್ರ ನೋಡ ನೋಡುತ್ತಿದ್ದಂತೆ ಅದೃಶ್ಯವಾದರೆ?! ಅರೇ ಇದು ಹೇಗೆ ಸಾಧ್ಯ. ಪದೇ ಪದೇ ಬಂದು ತೆರೆಗೆ ಅಪ್ಪಳಿಸುವ ಅಲೆಗಳು ಇದ್ದಕ್ಕಿದ್ದಂತೆ ಹೇಗೆ ಮಾಯವಾಗುತ್ತದೆ ಎಂದು ಮೂಗಿನ ಮೇಲೆ ಬೆರಳಿಡಬೇಡಿ. ಒಡಿಶಾದ ಚಾಂಡಿಪುರ ಸಮುದ್ರ ತೀರ ಇಂಥದ್ದೊಂದು ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಸಮುದ್ರದ ನೀರು ಇದ್ದಕ್ಕಿದ್ದಂತೆ 5-6 ಕಿ.ಮೀ.ಗಳಷ್ಟು ಹಿಂದೆ ಸರಿಯುತ್ತದೆ. ಈ ರೀತಿ ಸಮುದ್ರವೇ ಮಾಯವಾಗುವ ವಿದ್ಯಮಾನ ವಿಶ್ವದ ಬೇರೆಲ್ಲಿಯೂ ಕಾಣಸಿಗುವುದಿಲ್ಲ. ಹೀಗಾಗಿ ಇದನ್ನು ಕಣ್ಣಾ ಮುಚ್ಚಾಲೆ ಆಡುವ ಕಡಲತೀರ ಎಂದು ಕರೆಯಲಾಗುತ್ತದೆ.



ಇಲ್ಲೇನು ಜಾದೂ ನಡೆಯುತ್ತಾ?

ಚಾಂಡಿಪುರ ಸಮುದ್ರ ಇರುವುದು ಒಡಿಶಾ ರಾಜಧಾನಿ ಭುವನೇಶ್ವರದಿಂದ 200 ಕಿ.ಮೀ. ದೂರದಲ್ಲಿ. ಬಾಲಾಸೋರ್ ಜಿಲ್ಲೆಂದ 10 ಕಿ.ಮೀ. ಪ್ರಯಾಣಿಸಿದರೆ ಈ ಜಾಗವನ್ನು ತಲುಪಬಹುದು. ನೀರು ಇದ್ದಕ್ಕಿಂದ್ದಂತೆ ಮಾಯವಾಗುವ ವಿದ್ಯಮಾನದಿಂದಾಗಿ ಚಂಡಿಪುರ ಸಮುದ್ರ ತೀರ ಜಗತ್ತಿನ ಗಮನ ಸೆಳೆದಿದೆ. ದಡಕ್ಕೆ ಬಂದು ಅಪ್ಪಳಿಸುತ್ತಿದ್ದ ಸಮುದ್ರದ ಅಲೆಗಳು ನೋಡ ನೋಡುತ್ತಿದ್ದಂತೆ 5-6 ಕಿ.ಮೀ. ಹಿಂದೆ ಸರಿಯುತ್ತವೆ. ಸಮುದ್ರದ ಉಬ್ಬರ ಮತ್ತು ಇಳಿತದ ವೇಳೆ ಪ್ರತಿನಿತ್ಯವೂ ಇಂಥದ್ದೊಂದು ವಿದ್ಯಮಾನ ನಡೆಯುತ್ತದೆ. ಇಳಿತದ ವೇಳೆ ಸಮುದ್ರ ಬಯಲಿನಂತಾಗುತ್ತದೆ. ಆಗ ಅಲ್ಲಿ ಅಕ್ಷರಶಃ ನಡೆದಾಡಬಹುದು. ಅಷ್ಟೇ ಅಲ್ಲ ಸಮುದ್ರದಲ್ಲಿ ಬೈಕನ್ನೂ  ಓಡಿಸಬಹುದು. ಹೀಗೆ ಮಾಯವಾದ ಸಮುದ್ರದ ನೀರು ಉಬ್ಬರದ ಸಮಯದಲ್ಲಿ ಮರಳಿ ಬರುತ್ತದೆ. ಬರಿದಾಗಿದ್ದ ಸಮುದ್ರದ ಒಡಲು ಮತ್ತೆ ತುಂಬಿಕೊಳ್ಳುತ್ತದೆ. ಅಲೆಗಳು ವಾಪಸ್ ಬರುವುದನ್ನು ನೋಡುವುದೂ ಕೂಡ ಅಷ್ಟೇ ಕುತೂಹಲ. ಸ್ಥಳಿಯರಿಗೆ ಇದೊಂದು ನಿತ್ಯದ ವಿದ್ಯಮಾನದಂತೆ  ಕಂಡರೂ ಪ್ರವಾಸಿಗರಿಗೆ ಅಪೂರ್ವ ಅನುಭವ ನೀಡುತ್ತದೆ.

ಸಮುದ್ರದಲ್ಲಿ ನಡೆದಾಡಿ!
ನೀರು ಇಳಿಮುಖವಾದಾಗ ಸಮುದ್ರದಲ್ಲಿ ಹಾಯಾಗಿ ನಡೆದಾಡಿ ಆನಂದ ಅನುಭವಿಸಬಹುದು. ಅಷ್ಟೇ ಅಲ್ಲ ಕಾರು, ಬೈಕು ಸವಾರಿಯನ್ನೂ ಮಾಡಬಹುದು. ಉಬ್ಬರದ ಅವಧಿಯ ವರೆಗೂ ಅಲೆಗಳು ಬಂದು ಅಪ್ಪಳಿಸುತ್ತವೆ ಎಂಬ ಭಯವಿಲ್ಲದೇ ಓಡಾಡಬಹುದಾದ ಕಾರಣ ಚಾಂಡಿಪುರ ಕಡಲ ತೀರ ದೇಶ ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸೂಯಾಸ್ತದ ವೇಳೆ ಈ ಸಮುದ್ರ ತೀರ ನಯನ ಮನೋಹರವಾಗಿ ಗೋಚರಿಸುತ್ತದೆ.

ಕಾರಣ ನಿಗೂಢ:
ಉಬ್ಬರ ಮತ್ತು ಇಳಿತದ ವೇಳೆ ಸಮುದ್ರದ ನೀರಿನ ಮಟ್ಟದಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಾಸವಾಗುವುದು  ಸಾಮಾನ್ಯ. ಆದರೆ, ಕಿಲೋಮೀಟರ್ಗಟ್ಟಲೆ ಹಿಂದೆ ಸರಿಯುವುದನ್ನು ಬೇರೆಲ್ಲಿಯೂ ನೋಡಲು ಸಿಗುವುದಿಲ್ಲ. ಈ ರೀತಿ ಆಗುವುದಕ್ಕೆ ಏನು ಕಾರಣ ಎನ್ನುವುದಕ್ಕೆ ಇದುವರೆಗೂ ನಿಖರ ಉತ್ತರ ಸಿಕ್ಕಿಲ್ಲ. ಸಮತಟ್ಟಾದ ಪ್ರದೇಶವಾದ ಕಾರಣ ಸಮುದ್ರದ ನೀರು ಅಷ್ಟೊಂದು ಪ್ರಮಾಣದಲ್ಲಿ ಹಿಂದೆ ಸರಿಯುತ್ತದೆ ಎಂದು ಭಾವಿಸಲಾಗಿದೆ. ಆದರೆ, ಪ್ರತಿನಿತ್ಯ ಈ ವಿದ್ಯಮಾನ ನಡೆಯುತ್ತಲೇ ಇದೆ.

ಜೀವ ವೈವಿಧ್ಯ:
ಕಣ್ಣಾಮುಚ್ಚಾಲೆ ಆಟದಿಂದಷ್ಟೇ ಅಲ್ಲ, ಈ ಸಮುದ್ರ ತೀರ ಜೀವ ವೈವಿಧ್ಯತೆಗೂ ಹೆಸರಾಗಿದೆ. ಗಾಳಿ ಮರದ ತೋಪುಗಳು ಮತ್ತು ಬಿಳಿ ಮರಳಿನ ದಿಬ್ಬಗಳು ಇನ್ನಷ್ಟು ಮೆರಗು ನೀಡುತ್ತವೆ. ಹಲವಾರು ಬಗೆಯ ಮೀನುಗಳು, ಕುದುರೆಲಾಳದ ಏಡಿಗಳು, ಕೆಂಪು ಬಣ್ಣದ ಏಡಿಗಳು ಕಾಣಸಿಗುತ್ತವೆ. ಸಮುದ್ರದ  ಖಾದ್ಯಗಳನ್ನು ಸವಿಯಲು  ಇಷ್ಟಪಡುವವರಿಗೆ ಇದೊಂದು ಹೇಳಿ ಮಾಡಿಸಿದ ತಾಣ.

ಕ್ಷಿಪಣಿ ಉಡಾವಣೆ:

ಭಾರತೀಯ ಸೇನೆ ಅಥವಾ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ)ದ ಕ್ಷಿಪಣಿ ಪರೀಕ್ಷೆಗೆ ಇದೇ ಸಮುದ್ರವನ್ನು ಬಳಸಲಾಗುತ್ತದೆ. ಅಣ್ವಸ್ತ್ರ  ಸಾಮಥ್ರ್ಯದ ಆಕಾಶ್, ಪೃಥ್ವಿ,  ಅಗ್ನಿ ಕ್ಷಿಪಣಿಗಳ ಪರೀಕ್ಷಾರ್ಥ ಉಡಾವಣೆ ಕೈಗೊಳ್ಳಲಾಗುತ್ತದೆ.