ಪುಟ್ಟ ದೇಹದ ಇರುವೆಗಳನ್ನು ತಿಂದರೆ, ಹೊಟ್ಟೆ ತುಂಬುತ್ತದೆಯೇ? ಆದರೆ, ಈ ಪ್ರಾಣಿಗೆ ಇರುವೆಗಳೇ ಪ್ರಮುಖ ಆಹಾರ! ಇರುವೆಗಳ ಗೂಡು ಕಂಡರೆ ಸಾಕು ತನ್ನ ಉದ್ದನೆಯ ಮೂತಿ ತೂರಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತದೆ. ಹೀಗಾಗಿ ಇದಕ್ಕೆ ಇರುವೆ ಭಕ್ಷಕ ಅಥವಾ ಆಂಟ್ ಈಟರ್ ಎನ್ನುವ ಹೆಸರು ಬಂದಿದೆ.
ದಿನಕ್ಕೆ ಬೇಕು 35 ಸಾವಿರ ಇರುವೆ!
ಇರುವೆ ಭಕ್ಷಕ, ಬಾಯಿಯಲ್ಲಿ ಹಲ್ಲುಗಳಿಲ್ಲದ ಒಂದು ಸಸ್ತನಿ. ಹೀಗಾಗಿ ಘನ ಪದಾರ್ಥಗಳನ್ನು ಜೀರ್ಣಿಸಿಕೊಳ್ಳಲಾರದು. ಆದರೆ, ಆಹಾರವನ್ನು ತನ್ನ ಉದ್ದವಾದ ನಾಲಿಗೆಯ ಮೂಲಕ ಹೊಟ್ಟೆಗೆ ಇಳಿಸಿಕೊಳ್ಳುತ್ತದೆ. ಇದರ ನಾಲಿಗೆ ನಿಮಿಷಕ್ಕೆ 150 ರಿಂದ 160 ಬಾರಿ ಚಪ್ಪರಿಸುತ್ತದೆ. ದಿನವೊಂದಕ್ಕೆ ಸುಮಾರು 35 ಸಾವಿರದಷ್ಟು ಇರುವೆ ಮತ್ತು ಗೆದ್ದಲು ಹುಳಗಳನ್ನು ಇರುವೆ ಭಕ್ಷಕ ಕಬಳಿಸುತ್ತದೆ.
ನಿಮಿಷದಲ್ಲಿ ಮುಗಿಯುತ್ತೆ ಭೋಜನ
ಇದು ತನ್ನ ಹರಿತವಾದ ನಾಲ್ಕು ಇಂಚಿನ ಪಂಜಿನಿಂದ ಗೆದ್ದಲು ಹುಳದ ಹುತ್ತ ಮತ್ತು ಇರವೆಯ ಗೂಡನ್ನು ಅಗೆದು, ಅದರೊಳಗೆ ತನ್ನ ಉದ್ದನೆಯ ಮೂತಿಯನ್ನು ತೂರಿಸುತ್ತದೆ. ಆದರೆ, ಇರುವೆಗಳು ಬೇಗ ಜಾಗ ಖಾಲಿ ಮಾಡುವುದರಿಂದ ಎಷ್ಟು ಸಾಧ್ಯವೋ ಅಷ್ಟು ಬೇಗನೆ ತಿಂದು ಮುಗಿಸಬೇಕು. ಆ ಕೆಲಸವನ್ನು ಎರಡು ಅಡಿ ಉದ್ದದ ನಾಲಿಗೆ ಮಾಡುತ್ತದೆ.
ಇರುವೆಗಳು ಕಚ್ಚುವುದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ಒಂದೇ ನಿಮಿಷದಲ್ಲಿ ತನ್ನ ಭೋಜನವನ್ನು ಮುಗಿಸಿ ಅಲ್ಲಿಂದ ಪರಾರಿಯಾಗುತ್ತದೆ. ತನಗೆ ಮುಂದಿನಸಾರಿ ಮತ್ತೆ ಆಹಾರ ದೊರಕಬೇಕು ಎನ್ನುವ ಕಾರಣಕ್ಕೆ ಇರುವೆ ಗೂಡನ್ನು ಸಂಪೂರ್ಣವಾಗಿ ನಾಶ ಮಾಡುವುದಿಲ್ಲ.
ಮೂತಿಯೇ ಪ್ರಧಾನ ಅಂಗ
ಇರುವೆ ಭಕ್ಷಕಕ್ಕೆ ಕಣ್ಣು ಸರಿಯಾಗಿ ಕಾಣಿಸುವುದಿಲ್ಲ. ದೇಹಕ್ಕೆ ಉದ್ದನೆಯ ಮೂತಿಯೇ ಪ್ರಧಾನ ಅಂಗ. ಮೂಗಿನ ಮೂಲಕವೇ ಇರುವೆ ಗೂಡಿರುವ ಜಾಗವನ್ನು ಶೋಧಿಸಬಲ್ಲದು. ಅದು ಯಾವತ್ತೂ ತನ್ನ ಮೂತಿಯನ್ನು ನೆಲದತ್ತ ಮಾಡಿಯೇ ಸಂಚರಿಸುತ್ತಿರುತ್ತದೆ. ಇದರ ಮೂಗು ಮನುಷ್ಯರಿಗಿಂತಲೂ 40 ಪಟ್ಟು ಅಧಿಕ ವಾಸನೆಯನ್ನು ಗ್ರಹಿಸುವ ಸಾಮರ್ಥ್ಯ ಹೊಂದಿದೆ.
ಈ ವಿಚಿತ್ರ ಪ್ರಾಣಿ, ಮಧ್ಯ ಮತ್ತು ದಕ್ಷಿಣ ಅಮೆರಿಕದಲ್ಲಿ ಕಂಡುಬರುತ್ತದೆ. ಇದರ ಮೂತಿಯ ತುದಿಯಿಂದ ಬಾಲದವರೆಗಿನ ಉದ್ದ 5ರಿಂದ 7 ಅಡಿ. ಚಿಕ್ಕ ತಲೆ, ಉದ್ದನೆಯ ಮೂತಿ, ಚಿಕ್ಕ ಕಣ್ಣು, ಗೋಲಾಕಾರದ ಕಿವಿ ಇರುವೆ ಭಕ್ಷಕದ ದೇಹದ ಲಕ್ಷಣ. ದಟ್ಟವಾದ ಕೂದಲಿನಿಂದ ಕೂಡಿದ ಎರಡು ಅಡಿಯಷ್ಟು ಉದ್ದದ ಬಾಲವನ್ನು ಹೊಂದಿದೆ. ಇವು ಸ್ವಲ್ಪ ಸೋಮಾರಿ ಸ್ವಭಾವದವು ಪ್ರತಿದಿನ 15 ತಾಸು ನಿದ್ರಿಸುವುದರಲ್ಲಿಯೇ ಕಳೆಯುತ್ತವೆ.
ಮರವನ್ನೂ ಏರಬಲ್ಲದು
ಇರುವೆ ಭಕ್ಷಕ ಹೆಚ್ಚಾಗಿ ಏಕಾಂತದಲ್ಲಿಯೇ ಜೀವನ ಸಾಗಿಸುತ್ತದೆ. ವರ್ಷಕ್ಕೆ ಒಂದುಬಾರಿ ಮಾತ್ರ ಹೆಣ್ಣಿನ ಸಾಂಗತ್ಯ ಬೆಳೆಸುತ್ತದೆ. ತಾಯಿ ತನ್ನ ಮಗುವನ್ನು ಒಂದು ವರ್ಷ ಕಾಲ ಬೆನ್ನಿನ ಮೇಲೆ ಹೊತ್ತು ಸಾಕುತ್ತದೆ. ಇದು ಮೂಲತಃ ಆಕ್ರಮಣಕಾರಿ ಜೀವಿಯಲ್ಲ. ಆದರೆ, ತನಗೆ ಅಪಾಯ ಎದುರಾದರೆ, ತೀವ್ರ ಪ್ರತಿರೋಧ ತೋರುತ್ತವೆ. ಇರುವೆ ಭಕ್ಷಕದಲ್ಲಿ ನಾಲ್ಕು ಪ್ರಕಾರಗಳಿವೆ. ಅದರಲ್ಲಿ ಚಿಕ್ಕಗಾತ್ರದ ಆಂಟ್ ಇಟರ್ ಮರವನ್ನೂ ಏರಬಲ್ಲದು. ಇವುಗಳ ಸರಾಸರಿ ಆಯಸ್ಸು 25 ವರ್ಷ. ಇದು ಉತ್ತಮ ಈಜುಗಾರ ಕೂಡ. ಈಜುವಾಗ ತನ್ನ ಉದ್ದನೆಯ ಮೂತಿಯನ್ನು ಮೇಲೆ ಮಾಡಿ ಉಸಿರಾಡಾತ್ತದೆ.