ಜಗತ್ತಿನ ಅತಿದೊಡ್ಡ ಪರ್ವತ ಶ್ರೇಣಿ ಸಹ್ಯಾದ್ರಿಯ ಪಶ್ಚಿಮ ಘಟ್ಟಗಳು. ದಕ್ಷಿಣ ಭಾರತದ ಉತ್ತರ-ದಕ್ಷಿಣವಾಗಿ 1600 ಕಿ.ಮೀ. ಹಬ್ಬಿರುವ ಭವ್ಯ ಹಾಗೂ ವಿಹಂಗಮ ಪರ್ವತ ಶ್ರೇಣಿ. ದಖ್ಖನ್ ಫೀಠಭೂಮಿಯ ಪಶ್ಚಿಮ ಅಂಚಿನ ಉದ್ದಕ್ಕೂ ಹಬ್ಬಿರುವ ಇವು ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡನ್ನು ವ್ಯಾಪಿಸಿಕೊಂಡಿವೆ. ಒಟ್ಟು ಪರ್ವತ ಶ್ರೇಣಿಯ ಅರ್ಧಕ್ಕಿಂತಲೂ ಹೆಚ್ಚುಭಾಗ ಕರ್ನಾಟಕದಲ್ಲಿಯೇ ಇದೆ ಎನ್ನುವುದು ವಿಶೇಷ.
ಮಳೆ ಸುರಿಸುವ ಕಾಡು:
ಭಾರತದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಪಶ್ಚಿಮ ಘಟ್ಟಗಳೂ ಒಂದು. ಪಶ್ಚಿಮ ಘಟ್ಟದ ಕಾಡುಗಳು ದಕ್ಷಿಣ ಭಾರತಕ್ಕೆ ಮಳೆ ನೀಡುವ ಕಾಡು ಎಂದೇ ಪರಿಗಣಿಸಲ್ಪಟ್ಟಿದೆ. ಜೂನ್ನಿಂದ ಸೆಪ್ಟೆಂಬರ್ವರೆಗಿನ ಮಳೆಗಾಲದಲ್ಲಿ 3000ದಿಂದ 4000 ಮಿಲಿಮೀಟರ್ ಸರಾಸರಿ ಮಳೆ ಬೀಳುತ್ತದೆ. 1200 ಮೀಟರ್ ಎತ್ತರದ ಪಶ್ಚಿಮ ಘಟ್ಟವು ಮಳೆ ಉಂಟುಮಾಡುವ ಮಾರುತಗಳನ್ನು ತಡೆಯುವುದರಿಂದ ಈ ಪ್ರದೇಶವು ಸಹಜವಾಗಿಯೇ ಹೆಚ್ಚು ಮಳೆ ಪಡೆಯುವ ಪ್ರದೇಶವೆನಿಸಿದೆ. ನೈಋತ್ಯ ಮುಂಗಾರು ಘಟ್ಟಗಳು ಮತ್ತು ಅವುಗಳ ಪಶ್ಚಿಮ ಅಂಚಿನ ಪ್ರದೇಶದಲ್ಲಿ ಭಾರೀ ಮಳೆ ಸುರಿಸುತ್ತದೆ. ಈ ಪ್ರಕ್ರಿಯೆಯಿಂದಾಗಿ ಪಶ್ಚಿಮಘಟ್ಟ ಸದಾ ಹಸಿರಿನಿಂದ ಕೂಡಿರುತ್ತದೆ. ದೇಶದ ಹವಾಮಾನವನ್ನು ಸುಸ್ಥಿತಿಯಲ್ಲಿಡಲು ಪಶ್ಚಿಮ ಘಟ್ಟ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಅನೇಕ ಗಿಡ ಮೂಲಿಕೆ ಮತ್ತು ಔಷಧಿಯ ಸಸ್ಯಗಳಿಗೂ ಪಶ್ಚಿಮ ಘಟ್ಟ ಹೆಸರುವಾಸಿ.
ಕೊಂಕಣ, ಕೆನರಾ, ಮಲಬಾರ್:
ಅರಬ್ಬೀ ಸಮುದ್ರಕ್ಕೆ ಚಾಚಿಕೊಂಡಿರುವ ಕರಾವಳಿಯ ಉತ್ತರ ಭಾಗದ ಗೋವಾ ಮತ್ತು ಕಾರವಾರ ಕೊಂಕಣ ಪ್ರದೇಶವೆಂದು ಪ್ರಸಿದ್ಧಿ ಪಡೆದಿದೆ. ಮಧ್ಯದಭಾಗ ಕೆನರಾ ಮತ್ತು ದಕ್ಷಿಣ ಭಾಗವು ಮಲಬಾರ್ ಪ್ರಾಂತವೆಂದು ಕರೆಯಲ್ಪಟ್ಟಿದೆ.
ನದಿ, ಜಲಪಾತಗಳ ಆಗರ:
ಕಾವೇರಿ, ಕೃಷ್ಣಾ, ಗೋದಾವರಿ, ತಾಮ್ರಪರ್ಣಿ ದೊಡ್ಡ ನದಿಗಳೆನಿಸಿದ್ದು ಪೂರ್ವಾಭಿಮುಖವಾಗಿ ಹರಿದು ಬಂಗಾಳಕೊಲ್ಲಿಯನ್ನು ಸೇರುತ್ತದೆ. ಪಶ್ಚಿಮಕ್ಕೆ ಹರಿಯುವ ನದಿಗಳು ಉದ್ದದಲ್ಲಿ ಕಡಿಮೆಯಾಗಿದ್ದು, ರಭಸವಾಗಿ ಹರಿದು ಅರಬ್ಬೀ ಸಮುದ್ರವನ್ನು ಸೇರುತ್ತದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಶರಾವತಿ, ನೇತ್ರಾವತಿ, ಮಾಂಡವಿ, ಜುವಾರಿ, ಅಘನಾಶಿನಿ ಇತ್ಯಾದಿ. ಈ ನದಿಗಳು ವಿದ್ಯುತ್ ಯೋಜನೆಗಳಿಗೆ ನೆಲೆಯಾಗಿವೆ. ಇವುಗಳಿಗೆ ಅಡ್ಡವಾಗಿ ಕೊಯ್ನಾ, ಲಿಂಗನಮಕ್ಕಿ, ಪರಂಬಿಕುಲಂ, ಕೊಪೋಲಿ ಅಣೇಕಟ್ಟುಗಳನ್ನು ನಿರ್ಮಿಸಲಾಗಿದೆ. ಪಶ್ಚಿಮ ಘಟ್ಟದಲ್ಲಿ ಸುರಿಯುವ ಭಾರೀ ಮಳೆಯು ಜೋಗ, ಶಿವನ ಸಮುದ್ರ, ಉಂಚಳ್ಳಿ ಕುಂಚಿಕಲ್ ಮುಂತಾದ ವಿಶ್ವಪ್ರಸಿದ್ಧಿ ಜಲಪಾತಗಳನ್ನು ಸೃಷ್ಟಿಸಿವೆ.
ಗಿರಿ ಕಂದರಗಳ ಒಡಲು:
ಕೆಮ್ಮಣ್ಣುಗುಂಡಿ, ಕೊಡಚಾದ್ರಿ, ಕುದುರೆಮುಖ, ಮಹಾಬಲೇಶ್ವರ, ಸೋನ್ ಸಾಗರ್, ಮುಳ್ಳಯ್ಯನಗಿರಿ, ಆನೈಮುಡಿ ಮುಂತಾದ ಗಿರಿಶಿಖರಗಳನ್ನು ಪಶ್ಚಿಮ ಘಟ್ಟ ತನ್ನ ಸೌಂದರ್ಯದ ಒಡಲಲ್ಲಿ ತುಂಬಿಕೊಂಡಿದೆ. ಊಟಿ, ಕೊಡೈಕೆನಾಲ್, ಬೆರಿಜಂ ಮುಂತಾದ ತಂಪನೆಯ ಪ್ರದೇಶಗಳಿಗೆ ಹೆಸರು ಪಡೆದಿದೆ.
ಅಪರೂಪದ ಪ್ರಾಣಿ ಸಂಕುಲ:
ಪಶ್ಚಿಮ ಘಟ್ಟ ಸಾವಿರಾರು ತಳಿಯ ಪ್ರಾಣಿಗಳಿಗೆ ನೆಲೆಯಾಗಿದ್ದು, ಜಾಗತಿಕವಾಗಿ ವಿನಾಶದ ಅಂಚಿನಲ್ಲಿರುವ 325 ತಳಿಯ ಪ್ರಾಣಿಗಳನ್ನು ಹೊಂದಿದೆ. 120 ಪ್ರಜಾತಿಗಳಿಗೆ ಸೇರಿದ ಸ್ತನಿ ಪ್ರಾಣಿಗಳಿಗೆ ಪಶ್ಚಿಮ ಘಟ್ಟ ತವರು. ಅವುಗಳಲ್ಲಿ 14 ಪ್ರಾಣಿಗಳು ಕೇವಲ ಇಲ್ಲಿ ಮಾತ್ರವೇ ಕಂಡುಬರುತ್ತದೆ. ಸಲೀಂ ಅಲಿ ಹಣ್ಣುಗಳ ಬಾವಲಿ, ವ್ರಾಟನ್ಸ್ ಫ್ರೀ ಟೇಲ್ಡ್ ಬಾವಲಿ, ಸಿಂಹ ಬಾಲದ ಸಿಂಗಳೀಕ, ಕಪ್ಪು ಮುಖದ ಲಂಗೂರ, ಮಲಬಾರ್ ಪುನುಗು ಬೆಕ್ಕು, ರಂಜಿನಿ ಹೆಗ್ಗಣ, ಮಲಬಾರ್ ಬಕ, ಮಡ್ರಾಸ್ ಹೆಡ್ಗೆಹಾಗ್ ಉದಾಹರಣೆ ನೀಡಬಹುದಾದ ಕೆಲ ಪ್ರಜಾತಿಗಳು.
ವಿಶ್ವ ಪರಂಪರೆಯ ತಾಣ:
ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಅಪರೂಪದ ಪ್ರಾಣಿಗಳು ಅರಣ್ಯನಾಶದಿಂದಾಗಿ ಮತ್ತು ಮಳೆಯ ಕೊರತೆಯಿಂದಾಗಿ ವಿನಾಶದ ಅಂಚು ತಲುಪಿವೆ. ಒಂದು ಕಾಲದಲ್ಲಿ ಹೇರಳವಾಗಿ ಕಂಡುಬರುತ್ತಿದ್ದ ಪ್ರಾಣಿಗಳ ಸಂಖ್ಯೆ ಗಣನೀಯ ಮಟ್ಟದಲ್ಲಿ ಕುಸಿಯುತ್ತಿದೆ. ಇದನ್ನು ತಪ್ಪಿಸುವ ಸಂಬಂಧ. ಜುಲೈ 1, 2012ರಂದು ಈ ಪಶ್ಚಿಮ ಘಟ್ಟಗಳನ್ನು ವಿಶ್ವ ಪರಂಪರೆಯ ತಾಣವನ್ನಾಗಿ ಯುನೆಸ್ಕೊ ಘೋಷಣೆ ಮಾಡಿದೆ.